×
Ad

ಅದಿರು ಅಕ್ರಮದ ತನಿಖೆ ಎಸ್‌ಐಟಿಗೆ ವಹಿಸಲು ಚಿಂತನೆ: ಸಿದ್ದರಾಮಯ್ಯ

Update: 2017-11-04 22:16 IST

ಮಂಗಳೂರು, ನ.4: ಅದಿರು ಅಕ್ರಮ ಸಾಗಾಟ ಮತ್ತು ದಾಸ್ತಾನು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ವಹಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅವರು ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ಈ ಪ್ರಕರಣದಲ್ಲಿ 25 ಸಾವಿರ ಕೋಟಿ ರೂ.ಗೂ ಅಧಿಕ ವೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ದಾಸ್ತಾನು ಮತ್ತು ಸಾಗಾಟ ಮಾಡಿರುವ ಶಂಕೆ ಇದೆ. ಪ್ರಕರಣದ ತನಿಖೆ ನಡೆಸಿದ ಸಿಬಿಐ ಸಾಕ್ಷಾಧಾರವಿಲ್ಲ ಎಂದು ತನಿಖೆಯನ್ನು ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಬಗ್ಗೆ ಸರಕಾರ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

 ಬಿಜೆಪಿಯದ್ದು ಪಶ್ಚಾತ್ತಾಪ ರ್ಯಾಲಿ:ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ರ್ಯಾಲಿ ಪ್ಲಾಪ್ ಶೋ. ಅದು ಪರಿವರ್ತನೆ, ಅಲ್ಲ ಪಶ್ಚಾತ್ತಾಪ ರ್ಯಾಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪರಿವರ್ತನಾ ರ್ಯಾಲಿಯಲ್ಲಿ 3 ಲಕ್ಷ ಜನರನ್ನು ಸೇರಿಸುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ ರ್ಯಾಲಿಯಲ್ಲಿ ಸೇರಿದ್ದು ಬರೀ 20 ಸಾವಿರ ಜನ ಮಾತ್ರ. ಅದೊಂದು ಪ್ಲಾಪ್ ಶೋ ಎಂದು ಮುಖ್ಯಮಂತ್ರಿ ನುಡಿದರು. ಬಿಜೆಪಿಯ ರ್ಯಾಲಿಗೆ ಪರ್ಯಾಯವಾಗಿ ಕಾಂಗ್ರೆಸ್ ರ್ಯಾಲಿ ನಡೆಸುವುದಿಲ್ಲ. ಬದಲಾಗಿ ನಾವು ಜನರನ್ನು ಭೇಟಿಯಾಗುತ್ತೇವೆ ಎಂದರು.

ಮುಖ್ಯಮಂತ್ರಿಯನ್ನು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ, ಮನಪಾ ಮೇಯರ್ ಕವಿತಾ ಸನಿಲ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಅಭಯಚಂದ್ರ ಜೈನ್, ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News