ಬಜ್ಪೆ: ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಚಿನ್ನದ ಗಟ್ಟಿ ಪತ್ತೆ
Update: 2017-11-04 23:21 IST
ಮಂಗಳೂರು, ನ. 4: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಶುಕ್ರವಾರ ರಾತ್ರಿ ಶೌಚಾಲಯವನ್ನು ಶುಚಿಗೊಳಿಸುವ ವೇಳೆ ಸಿಬ್ಬಂದಿಗೆ ಚಿನ್ನದ ಗಟ್ಟಿ ಸಿಕ್ಕಿದೆ. ಕೂಡಲೇ ಸಿಬ್ಬಂದಿ ಚಿನ್ನದ ಗಟ್ಟಿಯನ್ನು ಕಂದಾಯ ಗುಪ್ತಚರ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಇನ್ನಷ್ಟು ಶೋಧ ನಡೆಸಿದಾಗ ವಿದೇಶಿ ಮೂಲದ ಚಿನ್ನದ ಗಟ್ಟಿ ಎಂದು ತಿಳಿದುಬಂದಿದೆ.
10 ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಇವು 24 ಕ್ಯಾರೆಟ್ ಚಿನ್ನದಿಂದ ತಯಾರಿಸಿದ ಗಟ್ಟಿಯಾಗಿದೆ. 1,166.500 ಗ್ರಾಂ ತೂಕ ಹೊಂದಿರುವ ಈ ಗಟ್ಟಿಗಳ ಮೌಲ್ಯ 34,17,845 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಚಿನ್ನದ ಗಟ್ಟಿಗಳನ್ನು ಯಾರು, ಯಾಕಾಗಿ ಶೌಚಾಲಯದಲ್ಲಿ ಇಟ್ಟಿದ್ದಾರೆಂಬುದು ತಿಳಿದುಬಂದಿಲ್ಲ.