ಸೆನ್ಸಾರ್ ಮಂಡಳಿಯಿಂದ ಅರ್ಹತೆ ಪಡೆದ ಚಿತ್ರಗಳ ಪ್ರಸಾರಕ್ಕೆ ತಡೆಯೊಡ್ಡುವುದು ಕಾನೂನು ಬಾಹಿರ: ಸಿದ್ಧಾರ್ಥ್ ವರದರಾಜನ್
ಮಂಗಳೂರು, ನ.4 : ಸೆನ್ಸಾರ್ ಮಂಡಳಿಯಿಂದ ಅರ್ಹತೆ ಪಡೆದ ಚಿತ್ರಗಳನ್ನು ಯಾರಾದರೂ ತಡೆ ಒಡ್ಡಿದರು, ಪ್ರತಿಭಟನೆ ಮಾಡಿದರು ಎಂಬ ಕಾರಣಕ್ಕೆ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡುವುದು ಸುಪ್ರೀಂಕೋರ್ಟಿನ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಖ್ಯಾತ ಪತ್ರಕರ್ತ ‘ದಿ ವೈರ್’ ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ತಿಳಿಸಿದ್ದಾರೆ.
ಅವರು ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಬಿ.ವಿ.ಕಕ್ಕಿಲ್ಲಾಯ ಸ್ಮರಣಾರ್ಥ ಉಪನ್ಯಾಸ ನೀಡಿದ ನಂತರ ನಡೆದ ಸಭಿಕರೊಂದಿಗಿನ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಂಜಯ್ ಲೀಲಾ ಬನ್ಸಾಲಾ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡುತ್ತಿರುವುದ ಬಗ್ಗೆ ಹಾಗೂ ಮೋದಿ, ರಾಹುಲ್ ಅಣಕದ ಟಿ.ವಿ ಚಾನೆಲ್ ಕಾರ್ಯಕ್ರಮಕ್ಕೆ ವಿರೋಧಿಸುವವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ಧಾರ್ಥ್ ವರದರಾಜನ್ ಪದ್ಮಾವತಿ ಚಲನಚಿತ್ರವಾಗಲಿ ಯಾವುದೇ ಚಲನಚಿತ್ರವಾಗಲಿ ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ಬಳಿಕ ಅದನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ಹೊಣೆಗಾರಿಕೆ ಆಯಾ ರಾಜ್ಯ ಸರಕಾರಗಳ ಹೊಣೆಗಾರಿಕೆಯಾಗಿದೆ. ತಪ್ಪಿದಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ಉಲಂಘಿಸಿದಂತಾಗುತ್ತದೆ. ಮೋದಿ ಅಧಿಕಾರಕ್ಕೆ ಬರುವ ಮೊದಲು ಪತ್ರಿಕಾ ಸ್ವಾತಂತ್ರದ ಬಗ್ಗೆ ಹಸ್ತ ಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ. ಆದರೆ ಬಳಿಕ ಅವರ ಬೆಂಬಲಿಗರು ಮೋದಿಯವರನ್ನು ಅಣಕಿಸುವ ಕಾರ್ಯಕ್ರಮ ಮಾಡಬಾರದು ( ರಾಹುಲ್ ಗಾಂಧಿಯನ್ನು ಅಣಕಿಸುವ ಬಗ್ಗೆ ಪ್ರಸ್ತಾಪಿಸದೆ ) ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಸರಕಾರವನ್ನು ಟೀಕಿಸಿ ಮಾತನಾಡುವವರಿಗೆ ನೋಟಿಸು ಜಾರಿ ಮಾಡಲಾಗುತ್ತದೆ. ಭಾರತದಲ್ಲಿ ಚಲನಚಿತ್ರ ಮಾಡುವುದನ್ನೇ ನಿಲ್ಲಿಸ ಬೇಕಾಗುತ್ತದೆ ಎಂದು ನಾನು ಲೇಖನ ಬರೆದರೆ ನನ್ನ ಮೇಲೆ ಕ್ರಮ ಕೈ ಗೊಳ್ಳಲು ಮುಂದಾದರೆ ಈ ಎಲ್ಲಾ ಕ್ರಮಗಳು ಕಾನೂನು ಬಾಹಿರ ಕ್ರಮಗಳಾಗುತ್ತವೆ. ಕಾನೂನು ಪಾಲಕರನ್ನು ನಿರ್ಬಂಧಿಸಿ ಗೂಂಡಾಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸಿದ್ಧಾರ್ಥ್ ವರದರಾಜನ್ ತಿಳಿಸಿದ್ದಾರೆ.