ಪಕ್ಷನಿಷ್ಠೆಗೆ ಮಣೆ: ಎಲ್ಲ 43 ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್
ಹೊಸದಿಲ್ಲಿ, ನ.5: ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ನಿಷ್ಠೆ ಮೆರೆದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಗೆಲುವಿಗೆ ಕಾರಣರಾಗಿದ್ದ ಗುಜರಾತ್ ಶಾಸಕರಿಗೆ ಕಾಂಗ್ರೆಸ್ ಪಕ್ಷ ದೊಡ್ಡ ಉಡುಗೊರೆ ನೀಡಿದೆ. ಗುಜರಾತ್ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಲಿ ಶಾಸಕರಾಗಿರುವ ಎಲ್ಲ 43 ಮಂದಿಗೆ ಮತ್ತೆ ಟಿಕೆಟ್ ನೀಡಿದೆ. ಪಕ್ಷದ ವಿರುದ್ಧ ಬಂಡಾಯ ಎದ್ದು ಶಂಕರ್‌ಸಿನ್ಹಾ ವಘೇಲಾ ಪರವಾಗಿ ಕೆಲ ಶಾಸಕರು ರಾಜೀನಾಮೆ ನೀಡಿದರೂ, ಪಕ್ಷಕ್ಕೆ ನಿಷ್ಠೆ ವ್ಯಕ್ತಪಡಿಸಿ ಉಳಿದ ಎಲ್ಲ ಶಾಸಕರನ್ನು ಮತ್ತೆ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.
ವಿರೋಧ ಪಕ್ಷದ ಪ್ರಬಲ ಆಮಿಷಗಳ ನಡುವೆಯೂ ಪಕ್ಷಕ್ಕೆ ನಿಷ್ಠರಾದವರಿಗೆ ಹೈಕಮಾಂಡ್ ನಿರಾಸೆ ಮಾಡುವುದಿಲ್ಲ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸುವುದು ಈ ನಡೆಯ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ. ಅಸ್ಸಾಂ ಹಾಗೂ ಉತ್ತರಾಖಂಡ ಚುನಾವಣೆಯಲ್ಲಿ ಹಿರಿಯ ಮುಖಂಡರ ಬಂಡಾಯದಿಂದಾಗಿ ಕಾಂಗ್ರೆಸ್ ಸೋಲು ಅನುಭವಿಸಿತ್ತು.
2012ರ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ ಕಾಂಗ್ರೆಸ್ 57ರಲ್ಲಿ ಜಯ ಸಾಧಿಸಿತ್ತು. ಬಿಜೆಪಿ 119 ಸ್ಥಾನ ಗೆದ್ದಿತ್ತು. ಆದರೆ ಬಂಡುಕೋರರು ಕಾಂಗ್ರೆಸ್ ಪಕ್ಷ ತೊರೆದ ಹಿನ್ನೆಲೆಯಲ್ಲಿ 43 ಮಂದಿ ಉಳಿದುಕೊಂಡಿದ್ದರು. ಪಕ್ಷ 80 ಸ್ಥಾನಗಳಿಗೆ ಟಿಕೆಟ್ ಅಂತಿಮಪಡಿಸಿದ್ದು, ಉಳಿದ ಕ್ಷೇತ್ರಗಳಿಗೆ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹಿರಿಯ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಯುವ ಮುಖಂಡರಾದ ಹಾರ್ದಿಕ್ ಪಟೇಲ್, ದಲಿತ ಮುಖಂಡ ಜಿಗ್ನೇಶ್ ಮೇವಾನಿ, ಹಿಂದುಳಿದ ವರ್ಗಗಳ ಮುಖಂಡ ಅಲ್ಪೇಶ್ ಠಾಕೂರ್ ಈಗಾಗಲೇ ಕಾಂಗ್ರೆಸ್ ಸೇರಿರುವುದರಿಂದ ಉಳಿದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಅವರ ಸಲಹೆಯನ್ನೂ ಪಡೆಯಲಿದೆ ಎಂದು ತಿಳಿದುಬಂದಿದೆ.