ದಿಲ್ಲಿಗಿಂತ ಹೃಷಿಕೇಶ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆ 15 ಪಟ್ಟು ದುಬಾರಿ!
ಡೆಹ್ರಾಡೂನ್, ನ.5: ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಮನೆಬಾಗಿಲಲ್ಲೇ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಹೃಷಿಕೇಶದಲ್ಲಿ ಆರಂಭಿಸಿರುವ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆ (ಎಐಐಎಂಎಸ್), ದಿಲ್ಲಿ ಎಐಐಎಂಎಸ್‌ಗಿಂತ 10ರಿಂದ 15 ಪಟ್ಟು ದುಬಾರಿಯಾಗಿರುವುದು ಜನರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಉದಾಹರಣೆಗೆ ದಿಲ್ಲಿ ಎಐಐಎಂಎಸ್‌ನ ಜನರಲ್ ವಾರ್ಡ್‌ನಲ್ಲಿ ಸಾಮಾನ್ಯ ಹೆರಿಗೆ ಉಚಿತ ಹಾಗೂ ಖಾಸಗಿ ವಾರ್ಡ್‌ನಲ್ಲಿ 2,000 ರೂಪಾಯಿ ವೆಚ್ಚವಾಗುತ್ತದೆ. ಆದರೆ ಹೃಷಿಕೇಶದಲ್ಲಿ ಇದು 7,500 ರೂ. ಆಗುತ್ತದೆ. ಅಂತೆಯೇ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಗೆ ಹೃಷಿಕೇಶದಲ್ಲಿ 99 ಸಾವಿರ ರೂ. ಇದ್ದರೆ, ದಿಲ್ಲಿ ಎಐಐಎಂಎಸ್ ಖಾಸಗಿ ವಾರ್ಡ್‌ನಲ್ಲಿ 8,000 ರೂ. ಕ್ಯಾನ್ಸರ್ ರೇಡಿಯೊಥೆರಪಿಗೆ ದಿಲ್ಲಿಯಲ್ಲಿ 3,000 ಇದ್ದರೆ, ಹೃಷಿಕೇಶದಲ್ಲಿ 29,750 ರೂಪಾಯಿ ದರ ನಿಗದಿಯಾಗಿದೆ.
ದಿಲ್ಲಿಯಲ್ಲಿ 250 ರೂಪಾಯಿಗೆ ಆಗುವ ಬಯಾಪ್ಸಿಗೆ ಹೃಷಿಕೇಶದಲ್ಲಿ 5,100 ರೂ.. ಅಕ್ಟೋಬರ್ 3ರಂದು ಸಂಸ್ಥೆಯ ಆಡಳಿತ ಮಂಡಳಿ ದರ ಪರಿಷ್ಕರಿಸಿರುವುದರಿಂದ ರೋಗಿಗಳ ಪಾಲಿಗೆ ಭಾರಿ ಹೊರೆ ಬಿದ್ದಿದೆ. ಆದರೆ ವೈದ್ಯರ ಸಲಹೆ ಮತ್ತು ಅಸ್ಪತ್ರೆಗೆ ದಾಖಲಾಗುವ ವೆಚ್ಚದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಆಸ್ಪತ್ರೆಗೆ ಉತ್ತರ ಪ್ರದೇಶ ಹಾಗೂ ಎನ್‌ಸಿಆರ್ ಪ್ರದೇಶದಿಂದ ಬಹಳಷ್ಟು ರೋಗಿಗಳು ಬರುತ್ತಾರೆ. ಆದರೆ ದರ ಏರಿಕೆ ಬಳಿಕ ರೋಗಿಗಳ ಸಂಖ್ಯೆ ಶೇಕಡ 40ರಷ್ಟು ಕಡಿಮೆಯಾಗಿದೆ ಎಂದು ಮೂಲಗಳು ಹೇಳುತ್ತವೆ.
ಕಾರ್ಪೊರೇಟ್ ಆಸ್ಪತ್ರೆಗಳಿಗೆ ಲಾಭ ಮಾಡುವ ಯೋಜಿತ ಉದ್ದೇಶದಿಂದ ಭಾರೀ ದರ ಏರಿಕೆ ಮಾಡಲಾಗಿದೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಸಿಂಗ್ ಅವರ ಆರೋಪ. ಈ ದರ ಏರಿಕೆ ವಿರುದ್ಧ ಆಸ್ಪತ್ರೆಯ ಮುಂದೆ ನವೆಂಬರ್ 3ರಿಂದ ದೊಡ್ಡ ಪ್ರತಿಭಟನೆಯೂ ನಡೆಯುತ್ತಿದೆ. ದಿಲ್ಲಿ ಎಐಐಎಂಎಸ್ ದರದಲ್ಲೇ ಇಲ್ಲೂ ಚಿಕಿತ್ಸೆ ನೀಡಬೇಕು ಎನ್ನುವುದು ಅವರ ಆಗ್ರಹ.