ಸರ್ಕಾರಿ ಯೋಜನೆಯಲ್ಲಿ ಸಿಗದ ಮನೆ: ಶೌಚಾಲಯವೇ ವಾಸತಾಣ

Update: 2017-11-05 04:52 GMT

ರೂರ್ಕೆಲಾ, ನ.5: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸ್ವಂತ ಮನೆಯ ಕನಸು ಕಾಣುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಸೌಲಭ್ಯ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಸ್ವಚ್ಛ ಭಾರತ ಯೋಜನೆಯಡಿ ಮಂಜೂರಾದ ಶೌಚಾಲಯದಲ್ಲೇ ಆತ ಜೀವನ ಸಾಗಿಸುವ ದಯನೀಯ ಘಟನೆ ಬೆಳಕಿಗೆ ಬಂದಿದೆ.

ನಾಲ್ಕಡಿ ಉದ್ದ, ಐದಡಿ ಅಗಲದ ಶೌಚಾಲಯವನ್ನೇ ಚೋಟು ರಾವತಿಯಾ (50) ಬಿಡಾರವಾಗಿ ಪರಿವರ್ತಿಸಿಕೊಂಡಿದ್ದಾರೆ. ಈತನ ಬಟ್ಟೆಬರೆ, ಸೊಳ್ಳೆ ಪರದೆ, ಪಾತ್ರೆ ಪಗಡೆ, ಒಂದು ಸ್ವೌ ಎಲ್ಲವೂ ಇದರಲ್ಲೇ. ಪದೇ ಪದೇ ಪಿಎಂಎವೈ ಯೋಜನೆಯಡಿ ಮನೆಗೆ ಮಾಡಿಕೊಂಡ ಮನವಿ ಪುರಸ್ಕರಿಸಿದ ಹಿನ್ನೆಲೆಯಲ್ಲಿ ಅನ್ಯಮಾರ್ಗವಿಲ್ಲದೇ ರಾವತಿಯಾ ಶೌಚಾಲಯದಲ್ಲೇ ವಾಸವಿದ್ದಾರೆ.

ರೂರ್ಕೆಲಾ ಉಕ್ಕು ಘಟಕ ಸ್ಥಾಪನೆ ವೇಳೆ 1955ರಲ್ಲಿ ರಾವುತಿಯಾ ಕುಟುಂಬದ ಮನೆ ಸ್ವಾಧೀನವಾಗಿತ್ತು. ಐದು ವರ್ಷಗಳ ಹಿಂದೆ ಪೋಷಕರು ಸಾಯುವವರೆಗೂ, ಪುನರ್ವಸತಿ ಕಾಲನಿಯಲ್ಲಿ ತಂದೆ ಕಟ್ಟಿಕೊಂಡಿದ್ದ ಮನೆಯಲ್ಲಿ ರಾವುತಿಯಾ ವಾಸವಿದ್ದರು. ಕಲ್ನಾರು ಛಾವಣಿ ಮತ್ತು ಶಿಥಿಲ ಗೋಡೆಗಳನ್ನು ನಿರ್ವಹಿಸುವುದು ಸಾಧ್ಯವಾಗದೇ ಅಲ್ಲಿಂದ ಬಿಡಬೇಕಾಯಿತು.

ನೆರೆಯವರ ಸಹಾಯದಿಂದ ಪಿಎಂಎವೈ ಯೋಜನೆಯಡಿ ಅರ್ಜಿ ಹಾಕಿದರೂ ಈ ಬಿಪಿಎಲ್ ಕಾರ್ಡ್‌ದಾರ, ಬುಡಕಟ್ಟು ಜನಾಂಗದ ಈತನಿಗೆ ಸೌಲಭ್ಯ ಸಿಗಲಿಲ್ಲ. ಈತನ ಸ್ಥಿತಿ ಕಂಡ ಅಧಿಕಾರಿಗಳು ಶೌಚಾಲಯ ಮಂಜೂರು ಮಾಡಿ "ಮಾನವೀಯತೆ" ಮೆರೆದರು. ಮಳೆ, ಬಿಸಿಲಿನಿಂದ ತಪ್ಪಿಸಿಕೊಳ್ಳಲು ರಾವುತಿಯಾ ಶೌಚಗೃಹದ ಮೊರೆ ಹೋಗುತ್ತಾರೆ. ಉಳಿದ ಅವಧಿಯಲ್ಲಿ ಹೊರಗೆಯೇ ಇರುತ್ತಾರೆ. ಶೌಚಾಲಯ ಮನೆಯಾಗಿರುವುದರಿಂದ ಎದುರಿನ ಬಯಲು ಈತನ ಶೌಚಾಲಯವಾಗಿದೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News