ಪ್ರಪ್ರಥಮ ಬ್ಯಾರೀಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ
ಮಂಗಳೂರು, ನ.5: ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ಮತ್ತು ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಜಂಟಿ ಆಶ್ರಯದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಬ್ಯಾರಿ ಸಮುದಾಯದ ಕ್ರೀಡಾಪಟುಗಳಿಗೆ ಏರ್ಪಡಿಸಿದ ಪ್ರಪ್ರಥಮ ಬ್ಯಾರೀಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ರವಿವಾರ ನಗರದ ಲಾಲ್‌ಬಾಗ್‌ನ ಯು.ಎಸ್.ಮಲ್ಯ ಇಂಡೋರ್ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಮತ್ತು ಡಿಕೆಡಿಬಿಎ ಇದರ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಬ್ಯಾರಿ ಸಮುದಾಯವು ಇಂದು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಬ್ಯಾರಿಗಳ ಮುಂಚೂಣಿಯಲ್ಲಿದ್ದಾರೆ. ಇದೀಗ ಕ್ರೀಡಾ ಕ್ಷೇತ್ರಕ್ಕೂ ದಾಪುಗಾಲು ಹಾಕುತ್ತಿರುವುದು ಸಂತಸದ ವಿಚಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಧಾರ್ಮಿಕ ಮತ್ತು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈಯುತ್ತಿರುವ ಬ್ಯಾರಿ-ಮುಸ್ಲಿಂ ಸಮುದಾಯವು ಇದೀಗ ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಮೂಡಿಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. ಭವಿಷ್ಯದ ದಿನಗಳಲ್ಲಿ ಬ್ಯಾರಿ ಸಮುದಾಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಬ್ಯಾರೀಸ್ ಸ್ಪೊರ್ಟ್ಸ್ ಪ್ರಮೋಟರ್ಸ್ ತನ್ನ ಉದ್ದೇಶವನ್ನು ಈಡೇರಿಸಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯೆನೆಪೊಯ ವಿಶ್ವವಿದ್ಯಾನಿಲಯದ ಹಣಕಾಸು ನಿರ್ದೇಶಕ ಯೆನೆಪೊಯ ಫರ್ಹಾದ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ಅಶೋಕ್ ಪೂವಯ್ಯ ಶುಭ ಹಾರೈಸಿದರು.
ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ವೆಂಕಟೇಶ್, ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್‌ನ ಅಧ್ಯಕ್ಷ ನೂರ್ ಮುಹಮ್ಮದ್, ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ.ಅಸ್ಲಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶವಾಝ್ ಕಿರಾಅತ್ ಪಠಿಸಿದರು. ಬ್ಯಾರೀಸ್ ಸ್ಪೊರ್ಟ್ಸ್ ಪ್ರಮೋಟರ್ಸ್‌ನ ಉಪಾಧ್ಯಕ್ಷ ಪಿ.ಸಿ. ರಈಝ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಖಲೀಲ್ ರಹ್ಮಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕಾರಿಣಿ ಸಮಿತಿಯ ಸದಸ್ಯ ಫಝಲ್ ವಂದಿಸಿದರು. ರಝಾಕ್ ಕಾರ್ಯಕ್ರಮ ನಿರೂಪಿಸಿದರು.
*ಓಪನ್ ಟು ಆಲ್ ಡಬಲ್ಸ್, ವಯೋಮಿತಿ 35+, 45+, 50+ಡಬಲ್ಸ್ ಹೀಗೆ ನಾಲ್ಕು ವಿಭಾಗಗಳಲ್ಲಿ ಸುಮಾರು 110 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.