ಮಾರ್ಗಮಧ್ಯ ಇಳಿದ ಪಿಐಎ ವಿಮಾನ

Update: 2017-11-05 09:37 GMT

ಲಾಹೋರ,ನ.5: ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್(ಪಿಐಎ)ನ ವಿಮಾನ ವೊಂದು ದುರ್ಬಲ ಗೋಚರತೆಯಿಂದಾಗಿ ಲಾಹೋರದಲ್ಲಿ ಇಳಿದಿದ್ದು, ಬಸ್‌ನಲ್ಲಿ ತಮ್ಮ ಪ್ರಯಾಣ ಮುಂದುವರಿಸುವಂತೆ ಪ್ರಯಾಣಿಕರನ್ನು ಬಲವಂತಗೊಳಿಸಿದ ಘಟನೆ ವರದಿ ಯಾಗಿದೆ.

ಅಬುಧಾಬಿಯಿಂದ ಪಾಕಿಸ್ತಾನದ ರಹೀಂ ಯಾರ್ ಖಾನ್‌ಗೆ ಪ್ರಯಾಣಿಸುತ್ತಿದ್ದ ಪಿಐಎ ವಿಮಾನ ಗೋಚರತೆ ಕ್ಷೀಣವಾಗಿದ್ದರಿಂದ ಲಾಹೋರ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಪ್ರಯಾಣಿಕರನ್ನು ಬಸ್‌ನಲ್ಲಿ ಅವರ ತಾಣಗಳಿಗೆ ಕರೆದೊಯ್ಯುವುದಾಗಿ ಪಿಐಎ ಸಿಬ್ಬಂದಿ ಗಳು ತಿಳಿಸಿದ್ದರು. ಆದರೆ ಇದನ್ನು ತಿರಸ್ಕರಿಸಿದ ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು.

ಪ್ರಯಾಣಿಕರನ್ನು ಕೆಳಗಿಳಿಸಲೇಬೇಕು ಎಂದು ಹಟ ಹಿಡಿದಿದ್ದ ಸಿಬ್ಬಂದಿಗಳು ವಿಮಾನದ ಏರ್ ಕಂಡಿಷನಿಂಗ್ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಮಕ್ಕಳು ಸೇರಿದಂತೆ ಪ್ರಯಾಣಿಕರಿಗೆ ಉಸಿರುಗಟ್ಟುವಂತಾಗಿತ್ತು.ಲಾಹೋರದಿಂದ ರಹೀಂ ಯಾರ್ ಖಾನ್ ಸುಮಾರು 624.5 ಕಿ.ಮೀ.ದೂರದಲ್ಲಿದೆ.

ರಹೀಂ ಯಾರ್ ಖಾನ್‌ನಿಂದ 292 ಕಿ.ಮೀ. ಅಂತರದಲ್ಲಿರುವ ಮುಲ್ತಾನ್ ವಿಮಾನ ನಿಲ್ದಾಣದವರೆಗೆ ತಮ್ಮನ್ನು ಬಿಡುವಂತೆ ಮತ್ತು ಅಲ್ಲಿಂದ ಮುಂದಕ್ಕೆ ವಿಮಾನಯಾನವನ್ನು ವ್ಯವಸ್ಥೆ ಮಾಡುವಂತೆ ತಾವು ಪಿಐಎಗೆ ಕೇಳಿಕೊಂಡಿದ್ದೆವು. ಅದಕ್ಕೂ ಒಪ್ಪಲಿಲ್ಲ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News