'ದೇಶದ ಅಭಿವೃದ್ದಿಗೆ ಮೂಲ ಕಾರಣ ವಿಶ್ವಕರ್ಮ ಸಮುದಾಯ'
ಉಡುಪಿ, ನ.5: ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಮೂಲ ಕಾರಣ ವಿಶ್ವಕರ್ಮ ಸಮುದಾಯ. ಈ ಸಮುದಾಯದ ಪಂಚಶಿಲ್ಪ ವೃತ್ತಿಗೆ ಸಂಬಂಧಿಸಿದ ಪ್ರತ್ಯೇಕ ಸಮಸ್ಯೆಗಳನ್ನು ಒಟ್ಟಿಗೆ ಚರ್ಚಿಸಿ ಸರಕಾರ ಬೇಡಿಕೆ ಸಲ್ಲಿಸುವುದು ಇಂದಿನ ಅಗತ್ಯವಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ಸ್ ಯೂನಿಯನ್‌ನ ಆಶ್ರಯ ದಲ್ಲಿ ಅಜ್ಜರಕಾಡು ಪುರಭವನದಲ್ಲಿ ರವಿವಾರ ಆಯೋಜಿಸಲಾದ ವಿಶ್ವಕರ್ಮ ಕಾರ್ಪೆಂಟರ್ಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಪೆಂಟರ್‌ಗಳು ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯಲ್ಲಿ ನೋಂದಾವಣಿ ಮಾಡಿಕೊಂಡು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಕೊಳ್ಳಬೇಕು. ಮಂಡಳಿಯಲ್ಲಿ ಸುಮಾರು 6000ಕೋಟಿ ರೂ. ಹಣ ಇದ್ದು, ಇದರಿಂದ ಕಾರ್ಮಿಕರ ಮಕ್ಕಳ ಮದುವೆ, ವಿದ್ಯಾರ್ಥಿ ವೇತನ, ಚಿಕಿತ್ಸೆ ವೆಚ್ಚ ಹಾಗೂ ಮರಣ ಪರಿಹಾರದಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ವಿಶ್ವಕರ್ಮ ಸಮುದಾಯವು ರಾಜಕೀಯದಲ್ಲಿ ತಳ ಹಂತದಿಂದ ಮೇಲಕ್ಕೆ ಬರುವ ಕೆಲಸ ಮಾಡಿದರೆ ಸುಸ್ಥಿರ ರಾಜಕೀಯ ಮಾಡಲು ಸಾಧ್ಯವಾಗುತ್ತದೆ. ಈ ಸಮುದಾಯ ರಾಜಕೀಯವಾಗಿ ಮುಂಚೂಣಿಗೆ ಬರಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ವಿಶ್ವಕರ್ಮ ಸಮು ದಾಯಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ದೊರೆಯ ಬೇಕು. ಆ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚಿಂತನೆ ನಡೆಸಬೇಕಾಗಿವೆ. ವಿಶ್ವಕರ್ಮ ಸಮುದಾಯದ ವೃತ್ತಿಗಳು ಉಳಿಯಬೇಕಾದರೆ ಅದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರಕಾರ 100 ಕೋಟಿ ವ್ಯಯ ಮಾಡಿ ತಯಾರಿಸಿರುವ ಜಾತಿ ಜನಗಣತಿ ಅಂಕಿ ಅಂಶವನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ 35ಲಕ್ಷ ಜನ ಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮುದಾಯಕ್ಕೆ ಸರಿಯಾಗಿ ರಾಜಕೀಯ ಸ್ಥಾನ ಮಾನ ಸಿಕ್ಕಿಲ್ಲ. ಈ ಸಮುದಾಯಕ್ಕೆ ಶಕ್ತಿ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಹಾಸನ ಅರೆಮಾದನಹಳ್ಳಿಯ ಶ್ರೀಶಿವಸುಜ್ಞಾನ ತೀರ್ಥ ಮಹಾಸ್ವಾಮಿ, ಕಟಪಾಡಿ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀ ಆಶೀರ್ವಚನ ನೀಡಿ ದರು. ಇದೇ ಸಂದರ್ಭದಲ್ಲಿ 12 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಯೂನಿಯನ್ ತಾಲೂಕು ಗೌರವಾಧ್ಯಕ್ಷ ಬಳ್ಕೂರು ಡಾ. ಗೋಪಾಲ ಆಚಾರ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯೆ ಸೆಲಿನ ಕರ್ಕಡ, ಉದ್ಯಮಿಗಳಾದ ಮನೋಹರ್ ಶೆಟ್ಟಿ, ಜೆ.ಪಿ.ಶೆಟ್ಟಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಸೀತಾರಾಮ ಆಚಾರ್ಯ, ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಶ್ರೀಧರ ಆಚಾರ್ಯ, ಯೂನಿಯನ್ ತಾಲೂಕು ಅಧ್ಯಕ್ಷ ಶ್ರೀಧರ ಆಚಾರ್ಯ ಕರಂಬಳ್ಳಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾನೂನು ಸಲಹೆಗಾರ ಎಚ್.ಎಂ.ಗಂಗಾಧರ ಆಚಾರ್ಯ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜಯಕರ ಬೈಲೂರು ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಉಡುಪಿ ಸರ್ವಿಸ್ ಬಸ್ ನಿಲ್ದಾಣ ದಿಂದ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು.
ನಿಗಮಕ್ಕೆ 100ಕೋಟಿ ರೂ. ಅನುದಾನ ನೀಡಿ
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಮೊದಲ ವರ್ಷ 5ಕೋಟಿ, ನಂತರ 10, ಇದೀಗ 25ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಒದಗಿಸಿದೆ. ಆದರೆ ಇದರಿಂದ ಹೆಚ್ಚಿನವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಆದುದರಿಂದ ಸರಕಾರ ನಿಗಮಕ್ಕೆ 100ಕೋಟಿ ರೂ. ಅನುದಾನ ನೀಡುವ ಮೂಲಕ ಅರ್ಹ ಎಲ್ಲ ಸಮುದಾಯ ಭಾಂದವರಿಗೆ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಹಾಸನ ಅರೆಮಾದನಹಳ್ಳಿಯ ಶ್ರೀಶಿವಸುಜ್ಞಾನ ತೀರ್ಥ ಮಹಾಸ್ವಾಮಿ ತಿಳಿಸಿದ್ದಾರೆ.
ರಾಜಕೀಯ ಮೀಸಲಾತಿಯು ಕೇವಲ ಗ್ರಾಪಂ, ತಾಪಂ, ಜಿಪಂ ಮಟ್ಟದಲ್ಲಿ ನೀಡಿದರೆ ಸಾಲದು. ಅದನ್ನು ವಿಧಾನಸಭೆ ಹಾಗೂ ಲೋಕಸಭೆಗೂ ವಿಸ್ತರಿಸ ಬೇಕು ಎಂದ ಅವರು, ಇಡೀ ಮನುಕುಲಕ್ಕೆ ಸೇವೆ ನೀಡುವ ವಿಶ್ವಕರ್ಮ ಸಮು ದಾಯ ಈವರೆಗೂ ತನ್ನ ಕಾಲ ಮೇಲೆ ನಿಲ್ಲುವಷ್ಟು ಸಮರ್ಥವಾಗದೆ ಇರುವುದು ಶೋಚನೀಯ ಎಂದರು.