×
Ad

ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಬಹುಭಾಷಾ ಸಮ್ಮೇಳನ: ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಆರ್.ಪಿ.ನಾಯ್ಕ

Update: 2017-11-05 17:19 IST

ಉಡುಪಿ, ನ.5: ಮಂಗಳೂರಿನಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ 150ನೆ ವರ್ಷಾಚರಣೆಯ ಪ್ರಯುಕ್ತ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಮಾ ರಂಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು ಮಂಗಳೂರು ವಿವಿಯ ಕೊಂಕಣಿ ಅಧ್ಯಯನ ಪೀಠದ ಜೊತೆ ಸೇರಿಕೊಂಡು ಅಂತಾರಾಷ್ಟ್ರೀಯ ಬಹುಭಾಷಾ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಿದ್ದು, ಅದಕ್ಕೆ 5 ಲಕ್ಷ ರೂ. ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಅಕಾಡಮಿ ಅಧ್ಯಕ್ಷ ಆರ್.ಪಿ. ನಾಯ್ಕೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಂಕಣಿ ಭಾಷೆಗೆ ಸಂವಿಧಾನದ ಎಂಟನೆ ಪರಿಚ್ಛೇಧದ ಮಾನ್ಯತೆ ದೊರೆತ ಬೆಳ್ಳಿಹಬ್ಬದ ಪ್ರಯುಕ್ತ ಅಕಾಡೆಮಿಯ ವತಿಯಿಂದ 25 ಸರಣಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಏಳು ಕಾರ್ಯಕ್ರಮವನ್ನು ನಡೆಸ ಲಾಗಿದೆ. ಮುಂದೆ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದೆಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕೊಂಕಣಿ ಭಾಷಾ ಕಲಿಕಾ ಅಭಿಯಾನವನ್ನು ಆಯೋಜಿಸಲಾಗಿದ್ದು, ಅದಕ್ಕಾಗಿ 10 ಶಾಲೆಗಳನ್ನು ಗುರುತಿಸಿ ಅಲ್ಲಿ ವಿದ್ಯಾರ್ಥಿ ಸಮ್ಮೇಳನ ನಡೆಸಲಾಗುವುದು. ಕೊಂಕಣಿ ಕೃತಿಗಳನ್ನು ಹೆಚ್ಚು ಹೆಚ್ಚು ಮಂದಿ ಓದುವ ನಿಟ್ಟಿನಲ್ಲಿ ಮೊಬೈಲ್ ಬಜಾರ್‌ನ್ನು ಆರಂಭಿಸಲಾಗಿದ್ದು, ಈ ವಾಹನವು ಕೊಂಕಣಿಗರು ಹೆಚ್ಚು ಇರುವ ಪ್ರದೇಶಕ್ಕೆ ತೆರಳಿ ಆಸಕ್ತರಿಗೆ ಕೊಂಕಣಿ ಪುಸ್ತಕ ಓದುವ ಅವಕಾಶವನ್ನು ಕಲ್ಪಿಸಲಿದೆ ಎಂದು ಅವರು ಹೇಳಿದರು.

ಮಂಗಳೂರಿನ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಕಳೆದ ವರ್ಷ ಆರಂಭಿಸಲಾಗಿರುವ ಎಂಎ ಕೊಂಕಣಿ ವಿಭಾಗದ ವಿದ್ಯಾರ್ಥಿ ವಿಶೇಷ ರಿಯಾ ಯಿತಿ ನೀಡಲಾಗಿದ್ದು, ಮೊದಲ ಐದು ವಿದ್ಯಾರ್ಥಿಗಳ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿ, ನಂತರ ಬರುವ 5 ವಿದ್ಯಾರ್ಥಿಗಳ ಅರ್ಧ ಶುಲ್ಕವನ್ನು ಭರಿಸ ಲಾಗಿದೆ. ಇದರಿಂದ ಈ ವರ್ಷ ಕೊಂಕಣಿ ವಿಭಾಗದಲ್ಲಿ 9 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ ಎಂದರು.

ಮಂಗಳೂರಿನಲ್ಲಿ ಕೊಂಕಣಿ ಭವನ ನಿರ್ಮಿಸುವ ಕುರಿತು ಮತ್ತು ಅಕಾ ಡೆಮಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ನೀಡುವ ಬಗ್ಗೆ ರಾಜ್ಯ ಸರಕಾರ ದೊಂದಿಗೆ ಮಾತುಕತೆ ನಡೆಸಲಾಗಿದ್ದು, ಇದಕ್ಕೆ ಸರಕಾರದಿಂದ ಸಕರಾತ್ಮಕ ಭರವಸೆ ದೊರೆತಿದೆ ಎಂದು ಆರ್.ಪಿ. ನಾಯ್ಕೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡಮಿ ರಿಜಿಸ್ಟ್ರಾರ್ ದೇವದಾಸ್ ಪೈ, ಮಂಗಳೂರು ವಿವಿಯ ಸೆನೆಟ್ ಸದಸ್ಯ ಅಮೃತ್ ಶೆಣೈ, ನಗರಸಭೆ ಸದಸ್ಯ ಜನಾರ್ದನ ಭಂಡಾರ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News