×
Ad

ಬಿಜೆಪಿ ಪರಿವರ್ತನಾ ಯಾತ್ರೆ ರಾಜಕೀಯ ಬದಲಾವಣೆಗೆ ದಿಕ್ಸೂಚಿ-ಡಿವಿ

Update: 2017-11-05 17:28 IST

ಪುತ್ತೂರು, ನ. 5: ಚುನಾವಣಾ ಪೂರ್ವಭಾವಿಯಾಗಿ 75 ದಿನಗಳ ಕಾಲ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಯಶಸ್ಸು ಮುಂದಿನ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಪುತ್ತೂರು ನಗರಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರ ನಿವಾಸದಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಒಡೆದು ಆಳುವ ನೀತಿಯಿಂದ ಜನ ರೋಸಿ ಹೋಗಿದ್ದಾರೆ. ಅಲ್ಲದೆ ರಾಜ್ಯದ ಕಾಂಗ್ರೆಸ್ ಒಡೆದ ಮನೆಯಾಗಿದೆ. ಮುಂದಿನ ಬಾರಿ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಎಲ್ಲಾ 224 ಕ್ಷೇತ್ರಗಳಲ್ಲೂ ನೇರ ಸ್ಫರ್ಧೆ ನಡೆಯಲಿದೆ. ಜೆಡಿಎಸ್ ಮತ್ತು ಇತರ ಸಣ್ಣಪುಟ್ಟ ಪಕ್ಷಗಳ ರಾಜಕೀಯ ಹೋರಾಟ ಇಲ್ಲಿ ಮುಖ್ಯವಾಗುವುದಿಲ್ಲ. ಬಿಜೆಪಿ 150ಕ್ಕೂ ಅಧಿಕ ಸ್ಥಾನ ಪಡೆದುಕೊಳ್ಳಲಿದೆ ಎಂದರು.

ರಾಜ್ಯದ ಬಿಜೆಪಿ ನಾಯಕರ ನಡುವೆ ಈಗ ಯಾವುದೇ ರೀತಿಯ ಅಭಿಪ್ರಾಯ ಬೇಧಗಳಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಭೇಟಿಯ ಬಳಿಕ ಬಿಜೆಪಿಯ ಎಲ್ಲಾ ನಾಯಕರು ಏಕಮುಖವಾಗಿ ಸಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತ ಜನರ ಮೆಚ್ಚುಗೆ ಗಳಿಸಿದೆ. ಈ ಕಾರಣದಿಂದ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಾ, ರಾಜಕೀಯವಾಗಿ ದುರ್ಬಲಗೊಳ್ಳುತ್ತಿದೆ ಎಂದರು.

ಜಿಲ್ಲೆಯ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿ ಮಹಾಮಾತೆ ದೇಯಿ ಬೈದೇತಿಯ ಪ್ರತಿಮೆಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು. ಪಾರದರ್ಶಕ ತನಿಖೆಯಿಂದ ಸತ್ಯ ಹೊರಬರಬೇಕು. ಈ ಮೂಲಕ ಅವಳಿ ವೀರ ಪುರುಷರ ಮೇಲಿನ ನಂಬಿಕೆಗೆ ಆದ ಅಪಚಾರಕ್ಕೆ ಉತ್ತರ ಸಿಗಬೇಕು. ಕೇವಲ ತುಷ್ಠೀಕರಣದ ಕಾರಣಕ್ಕಾಗಿ ಇಂತಹ ಧಾರ್ಮಿಕ ನಂಬಿಕೆಯ ಪ್ರಕರಣಗಳನ್ನು ಮುಚ್ಚಿ ಹಾಕುವುದು ಸರಿಯಲ್ಲ ಎಂದು ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಬಿಜೆಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಎಸ್. ಅಪ್ಪಯ್ಯ ಮಣಿಯಾಣಿ, ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು, ಹರೀಶ್ ನಾಕ್, ಮಹಿಳಾ ಮೋರ್ಚಾದ ಗೌರಿ ಬನ್ನೂರು, ಚಂದ್ರಶೇಖರರಾವ್ ಬಪ್ಪಳಿಗೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News