ರೈತರೇ ನೇರವಾಗಿ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಅಳವಡಿಸಲು ಅವಕಾಶ
ಉಡುಪಿ, ನ.5: ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಮಯದಲ್ಲಿ ಬೆಳೆ ಹಾನಿಗೆ ಒಳಗಾಗುವ ರೈತರಿಗೆ ಶೀಘ್ರವೇ ಗರಿಷ್ಠ ನೆರವು ನೀಡುವ ಉದ್ದೇಶ ದಿಂದ ರಾಜ್ಯ ಸರಕಾರ ರಾಜ್ಯಾದ್ಯಂತ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸುತ್ತಿದ್ದು, ಸಮಯ ಮಿತಿಯೊಳಗೆ ಈ ಕಾರ್ಯ ಪೂರ್ಣಗೊಳಿಸಬೇಕಾಗಿರು ವುದರಿಂದ ರೈತರೇ ನೇರವಾಗಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಈ ವಿನೂತನ ಮೊಬೈಲ್ ಆ್ಯಪ್ ಮೂಲಕ ಬೆಳೆ ದಾಖಲಿಸುವ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಗ್ರಾಮ ಕರಣಿಕರು ಈ ಕಾರ್ಯದಲ್ಲಿ ತೊಡಗಿದ್ದರೂ ಈವರೆಗೆ ಹೆಚ್ಚಿನ ಪ್ರಮಾಣ ದಲ್ಲಿ ಬೆಳೆ ಸಮೀಕ್ಷೆ ನಡೆಯದ ಕಾರಣ ಜಿಲ್ಲೆಯ ರೈತರೇ ನೇರವಾಗಿ ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ದಾಖಲಿಸಲು ಸರಕಾರ ಆಪ್ ಬಿಡುಗಡೆ ಮಾಡಿದೆ. ಇದನ್ನು ಬಳಸಿಕೊಂಡು ರೈತರೂ ಸಹ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಕೈಗೊಳ್ಳಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಡ್ರಾಯ್ಡ್ ಸೌಲಭ್ಯ ಇರುವ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ FORMER’S CROP SURVE ಎಂದು ಚೆಕ್ ಮಾಡಿ, ಅಲ್ಲಿ ಇರುವ ಬೆಳೆ ಸಮೀಕ್ಷೆ ಎಂಬ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಅಲ್ಲಿ ಬಳಕೆದಾರರ ಹೆಸರು, ಮೊಬೈಲ್, ಆಧಾರ್ ಸಂಖ್ಯೆ ನೀಡಿ ಒಟಿಪಿ ಪಡೆಯಬೇಕು. ನಂತರ ವರ್ಷ, ಮುಂಗಾರು ಋತು ಆಯ್ಕೆ ಮಾಡಿಕೊಂಡು, ಅಪ್ಲೆಕೇಷನ್‌ನಲ್ಲಿ ಇರುವ ಮಾಹಿತಿಯನ್ನು ದಾಖಲಿಸಿ, ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮಾಡಿಕೊಳ್ಳಬಹುದಾಗಿದೆ. ಅತ್ಯಂತ ಸುಲಭವಾಗಿರುವ ಈ ಆಪ್ ಎಲ್ಲ ರೈತರೂ ಸುಲಭವಾಗಿ ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 9,91,895 ಪ್ಲಾಟ್ಸ್(ರೈತರ ಜಮೀನು) ಇದ್ದು, ಗ್ರಾಮ ಕರಣಿಕರು ಈಗಾಗಲೇ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದು, ಇವರೊಂದಿಗೆ ರೈತರು ಆಸಕ್ತಿ ವಹಿಸಿ ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆಪ್ ಬಳಸಿ ದಾಖಲಿಸಬೇಕು. ಮೊಬೈಲ್ ಆಪ್ ಮೂಲಕ ಬೆಳೆಗಳನ್ನು ದಾಖಲಿಸು ವುದರಿಂದ ಪ್ರತಿಯೊಬ್ಬ ರೈತನೂ ಬೆಳೆಯಲಾದ ಬೆಳೆಗಳ ವಿವರ ಕ್ಷೇತ್ರದ ಜತೆಗೆ ನೀರಾವರಿ ಸೇರಿದಂತೆ ಸಂಪೂರ್ಣ ವರದಿ ಸಂಗ್ರಹವಾಗಲಿದೆ. ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ಪಸಲು ನಷ್ಟದ ನೈಜತೆಯನ್ನಾಧಿರಿಸಿ ರೈತಾಪಿ ವರ್ಗದ ಜನರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ ಶೀಘ್ರ ವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.