×
Ad

ನೋಟು ರದ್ದತಿಯ ಬಳಿಕ ಬ್ಯಾಂಕ್ ಗಳಲ್ಲಿ 17,000 ಕೋ.ರೂ. ಜಮಾ ಮಾಡಿದ್ದ ಬೇನಾಮಿ ಕಂಪನಿಗಳು

Update: 2017-11-05 20:23 IST

ಹೊಸದಿಲ್ಲಿ,ನ.5: ಎರಡು ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ನಿಷ್ಕ್ರಿಯವಾಗಿದ್ದ ಸುಮಾರು 2.24 ಲ.ಕಂಪನಿಗಳ ನೋಂದಣಿಗಳನ್ನು ಈವರೆಗೆ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ರವಿವಾರ ಹೇಳಿಕೆ ಯೊಂದರಲ್ಲಿ ತಿಳಿಸಿದೆ. ಈ ಕಂಪನಿಗಳ ಪೈಕಿ ಕೆಲವನ್ನು ಬೇನಾಮಿಗಳೆಂದು ಶಂಕಿಸಲಾಗಿದೆ.

 56 ಬ್ಯಾಂಕುಗಳು ಒದಗಿಸಿರುವ ಸುಮಾರು 35,000 ಕಂಪನಿಗಳು ಮತ್ತು 58,000 ಬ್ಯಾಂಕ್ ಖಾತೆಗಳ ಮಾಹಿತಿಗಳ ಆಧಾರದಲ್ಲಿ ಸರಕಾರವು ಕಂಪನಿಗಳ ನೋಂದಣಿಗಳನ್ನು ರದ್ದುಗೊಳಿಸಿದೆ. ಕಳೆದ ವರ್ಷದ ನವೆಂಬರ್ 8ರಂದು 500 ಮತ್ತು 1,000 ರೂ. ನೋಟುಗಳನ್ನು ನಿಷೇಧಿಸಿದ ಬಳಿಕ 17,000 ಕೋ.ರೂ.ಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲಾಗಿತ್ತು ಮತ್ತು ಬಳಿಕ ಹಿಂಪಡೆಯಲಾಗಿತ್ತು ಎನ್ನುವುದನ್ನು ಈ ಕಂಪನಿಗಳ ಕುರಿತು ನಡೆಸಲಾದ ಪ್ರಾಥಮಿಕ ತನಿಖೆಗಳು ಬಹಿರಂಗಗೊಳಿಸಿವೆ.

 ಒಂದು ಕಂಪನಿಯು 2,134 ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಮತ್ತು ಶೂನ್ಯ ಆರಂಭಿಕ ಶಿಲ್ಕು ಹೊಂದಿದ್ದ ಸಂಸ್ಥೆಯೊಂದು ನೋಟು ಅಮಾನ್ಯದ ಬಳಿಕ 2,484 ಕೋ.ರೂ.ಗಳನ್ನು ತನ್ನ ಖಾತೆಯಲ್ಲಿ ಜಮಾ ಮಾಡಿ ಬಳಿಕ ವಾಪಸ್ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿಕೆಯು ತಿಳಿಸಿದೆ.

ನೋದಣಿ ರದ್ದುಗೊಂಡಿರುವ ಶಂಕಾಸ್ಪದ ಕಂಪನಿಗಳ ಬ್ಯಾಂಕ್ ಖಾತೆಗಳ ಸ್ಥಂಭನ, ಅವುಗಳ ಚರ ಮತ್ತು ಸ್ಥಿರಾಸ್ತಿಗಳ ಮಾರಾಟ ಮತ್ತು ವರ್ಗಾವಣೆಗೆ ನಿರ್ಬಂಧ ಸೇರಿದಂತೆ ಹಲವಾರು ಕ್ರಮಗಳನ್ನು ಸರಕಾರವು ತೆಗೆದುಕೊಂಡಿದೆ. ಇಂತಹ ವಹಿವಾಟುಗಳ ನೋಂದಣಿಯನ್ನು ತಡೆಯುವಂತೆ ರಾಜ್ಯ ಸರಕಾರಗಳಿಗೂ ಸೂಚಿಸಲಾಗಿದೆ.

ಪ್ರಧಾನಿ ಕಚೇರಿಯು ರಚಿಸಿರುವ ವಿಶೇಷ ಕಾರ್ಯಪಡೆಯು ಪ್ರಧಾನಿ ನರೇಂದ್ರ ಮೋದಿಯವರ ಕಪ್ಪುಹಣದ ವಿರುದ್ಧ ಅಭಿಯಾನದ ಅಂಗವಾಗಿ ಕೈಗೊಂಡಿರುವ ವಿಶೇಷ ಅಭಿಯಾನದಡಿ ನಿಷ್ಕ್ರಿಯ ಕಂಪನಿಗಳ ನೋಂದಣಿಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ತನ್ಮಧ್ಯೆ ಸತತ ಮೂರು ಹಣಕಾಸು ವರ್ಷಗಳಿಗೆ ಲೆಕ್ಕಪತ್ರಗಳು ಮತ್ತು ವಾರ್ಷಿಕ ವರದಿಗಳನ್ನು ಸಲ್ಲಿಸಲು ವಿಫಲಗೊಂಡಿರುವ ಕಂಪನಿಗಳ 3.09 ಲ.ನಿರ್ದೇಶಕರನ್ನು ಸಚಿವಾಲಯವು ಅನರ್ಹಗೊಳಿಸಿದೆ. ಈ ಪೈಕಿ 3000 ನಿರ್ದೇಶಕರು ಶಾಸನಾತ್ಮಕ ಮಿತಿಯನ್ನು ಮೀರಿ 20ಕ್ಕೂ ಅಧಿಕ ಕಂಪನಿಗಳ ಆಡಳಿತ ಮಂಡಳಿಗಳಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 ವಂಚನೆಯನ್ನು ಎಸಗಿರುವ ಯಾವುದೇ ವ್ಯಕ್ತಿಯನ್ನು ಬಂಧಿಸಲು ಗಂಭೀರ ವಂಚನೆಗಳ ತನಿಖಾ ಕಚೇರಿ(ಎಸ್‌ಎಫ್‌ಐಒ)ಗೆ ಸಚಿವಾಲಯವು ಅಧಿಕಾರ ನೀಡಿದೆ. ಡಮ್ಮಿ ನಿರ್ದೇಶಕರನ್ನು ತಡೆಯಲು ತಾನು ಕ್ರಮಗಳನ್ನು ಕೈಗೊಂಡಿದ್ದು, ಡೈರೆಕ್ಟರ್ ಐಡೆಂಟಿಫಿಕೇಷನ್ ನಂಬರ್(ಡಿಐಎನ್)ಗೆ ಅರ್ಜಿ ಸಲ್ಲಿಸುವಾಗ ಪಾನ್ ಮತ್ತು ಆಧಾರ್ ಸಲ್ಲಿಕೆಯನ್ನುಕಡ್ಡಾಯಗೊಳಿಸಿರುವುದಾಗಿಯೂ ಸಚಿವಾಲಯವು ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News