ನಿರ್ಮಾಣ ಕಾರ್ಮಿಕರ ನಿಧಿ ಲ್ಯಾಪ್‌ಟಾಪ್, ವಾಷಿಂಗ್ ಮೆಷಿನ್ ಖರೀದಿಗೆ ಬಳಕೆ: ಸುಪ್ರೀಂ ಕೋರ್ಟ್ ಕಳವಳ
ಹೊಸದಿಲ್ಲಿ, ನ. 5: ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ ಭರ್ಜರಿ 29,000 ಕೋಟಿ ರೂ. ನಿಧಿಯನ್ನು ಲ್ಯಾಪ್‌ಟಾಪ್, ವಾಷಿಂಗ್ ಮೆಷಿನ್ ಖರೀದಿಸಲು ವೆಚ್ಚ ಮಾಡಲಾಗಿದೆ ಹಾಗೂ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಶೇ. 10ಕ್ಕಿಂತಲೂ ಕಡಿಮೆ ನಿಧಿ ವಿನಿಯೋಗಿಸಲಾಗಿದೆ.
ಇದು ಆಘಾತಕಾರಿ ಹಾಗೂ ಅತ್ಯಂತ ಕಳವಳಕಾರಿ ಎಂದು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್, ನಿರ್ಮಾಣ ಕಾರ್ಮಿಕರ ಕಾನೂನು ಅಡಿಯ ಸೆಸ್ ಮೂಲಕ ಸರಕಾರ ಸಂಗ್ರಹಿಸಿದ ನಿಧಿಯನ್ನು ಫಲಾನುಭವಿಗಳ ಕಲ್ಯಾಣಕ್ಕೆ ಬಳಸುವ ಬದಲು ಪೋಲು ಮಾಡಲಾಗಿದೆ ಹಾಗೂ ಬೇರೆ ಕಾರ್ಯಕ್ಕೆ ಬಳಸಲಾಗಿದೆ ಎಂದು ಹೇಳಿದೆ.
ಈ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ, ಹೇಗೆ ಕಾನೂನನ್ನು ಅನುಷ್ಠಾನಗೊಳಿಸಬೇಕಿತ್ತು ಹಾಗೂ ಯಾಕೆ ಈ ಕಾನೂನು ದುರ್ಬಳಕೆ ಆಯಿತು ಎಂಬುದನ್ನು ಅರ್ಥ ಮಾಡಿಸಲು ನವೆಂಬರ್ 10ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕೇಂದ್ರ ಕಾರ್ಮಿಕ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ನಿರ್ಮಾಣ ಕಾರ್ಮಿಕರನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಮಹಾಲೇಖಪಾಲರು ಸಲ್ಲಿಸಿದ ಅಫಿದಾವಿತ್‌ನಲ್ಲಿ ಕಳವಳಕಾರಿ ವಿವರಗಳಿವೆ. ನಿರ್ಮಾಣ ಕಾರ್ಮಿಕರ ಕಲ್ಯಾಣದ ನಿಧಿಯನ್ನು ವೆಚ್ಚ ಮಾಡಿರುವುದು ಅವರಿಗೆ ಲ್ಯಾಪ್‌ಟಾಪ್ ಹಾಗೂ ವಾಷಿಂಗ್ ಮೆಷಿನ್ ಖರೀದಿಸಲು. ಇದು ಸುಪ್ರೀಂ ಕೋರ್ಟ್‌ಗೆ ಆಘಾತ ಉಂಟು ಮಾಡಿದೆ.
ನಿರ್ಮಾಣ ಕಾರ್ಮಿಕರಿಗೆ ಮೀಸಲಿಟ್ಟ ಕೋಟಿಗಟ್ಟಲೆ ರೂಪಾಯಿಯನ್ನು ಹೇಗೆ ವೆಚ್ಚ ಮಾಡಲಾಯಿತು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಮಹಾಲೇಖಪಾಲರಿಗೆ ಸೂಚಿಸಿತ್ತು.
ಬಾಕ್ಸ್
ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ ದುರ್ಬಳಕೆ ಕುರಿತಂತೆ ಸರಕಾರೇತರ ಸಂಸ್ಥೆ ನಿರ್ಮಾಣ ಕಾರ್ಮಿಕರ ಕೇಂದ್ರ ಕಾಯ್ದೆಯ ರಾಷ್ಟ್ರೀಯ ಅಭಿಯಾನ ಸಮಿತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಅಫಿದಾವಿತ್ ಸಲ್ಲಿಸಲು ಮಹಾಲೇಖಪಾಲರಿಗೆ ನಿರ್ದೇಶಿಸಿತ್ತು.