ಕಂಬಳಕ್ಕೆ ಅನಿಶ್ಚಿತತೆಯ ತೂಗುಗತ್ತಿ: ನ.6ರಂದು ಪೇಟಾ ಅರ್ಜಿ ವಿಚಾರಣೆ

Update: 2017-11-05 16:27 GMT

ಮಂಗಳೂರು, ನ.5: ಕರ್ನಾಟಕದಲ್ಲಿ ಕಂಬಳ ಪುನಾರಂಭಿಸಲು ರಾಜ್ಯ ಸರಕಾರ ಹೊರಡಿಸಿದ್ದ ಅಧ್ಯಾದೇಶದ ವಿರುದ್ಧ ಪ್ರಾಣಿ ದಯಾ ಸಂಘಟನೆ ಪೇಟಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಸೋಮವಾರ ನಡೆಯಲಿದೆ. ಇದರಿಂದ ಕಂಬಳದ ಮೇಲೆ ಅನಿಶ್ಚಿತತೆಯ ತೂಗುಗತ್ತಿ ಇನ್ನೂ ನೇತಾಡುತ್ತಿದೆ.

ಕರ್ನಾಟಕ ಸರಕಾರದ ಕಂಬಳ ಅಧ್ಯಾದೇಶದ ವಿರುದ್ಧ ಪೇಟಾ ಸಲ್ಲಿಸಿದ ದಾವೆಯನ್ನು ಶನಿವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ಪೀಠ ವಿಚಾರಣೆಯನ್ನು ನವೆಂಬರ್ 6ರ ವರೆಗೆ ಮುಂದೂಡಿದೆ.

ಸೆಪ್ಟಂಬರ್ 23ರಂದು ಪೇಟಾ ಸಲ್ಲಿಸಿರುವ ದಾವೆಯಲ್ಲಿ ಕರ್ನಾಟಕದಲ್ಲಿ ಕಂಬಳ ಆಯೋಜಿಸಲು ಅಧ್ಯಾದೇಶ ಮಂಜೂರು ಮಾಡಿರುವುದು ಕಾನೂನಿನ ಉಲ್ಲಂಘನೆ ಎಂದು ಪ್ರತಿಪಾದಿಸಿತ್ತು. ಸುಪ್ರೀಂ ಕೋರ್ಟ್ ಈ ದಾವೆಯನ್ನು ವಿಚಾರಣೆಗೆ ಅಕ್ಟೋಬರ್ 23ರಂದು ಸ್ವೀಕರಿಸಿತ್ತು. ಪ್ರಾಣಿ ಕ್ರೌರ್ಯ ತಡೆ (ಕರ್ನಾಟಕ ತಿದ್ದುಪಡಿ) ಅಧ್ಯಾದೇಶ-2017 ಘೋಷಣೆಗೆ ರಾಷ್ಟ್ರಪತಿ ಒಪ್ಪಿಗೆ ನೀಡಿದ ಬಳಿಕ ಪ್ರಸ್ತಾಪಿತ ಕಂಬಳ ಕಾಯ್ದೆ ಬಗ್ಗೆ ಆಗಸ್ಟ್ 20ರಂದು ಗಝೆಟ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಇದನ್ನು ಕಾಯ್ದೆಯಾಗಿ ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಶಾಸನ ಸಭೆ ಇದೇ ಮಸೂದೆಯನ್ನು 2017 ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಶಾಸನ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತ್ತೊಮ್ಮೆ ಅಂಗೀಕರಿಸಿತ್ತು.

  ಈ ನಡುವೆ ಕರ್ನಾಟಕ ಹೈಕೋರ್ಟ್ ನಿಷೇಧ ವಿಧಿಸಿದ ಹಲವು ತಿಂಗಳುಗಳ ಬಳಿಕ ಕಂಬಳಕ್ಕೆ ಸಿಕ್ಕಿದ ಜಯವನ್ನು ನವೆಂಬರ್ 11ರಂದು ಮೂಡುಬಿದಿರೆಯಲ್ಲಿ ಕಂಬಳ ಆಯೋಜಿಸುವ ಮೂಲಕ ಸಂಭ್ರಮಿಸಲು ನಿರ್ಧರಿಸಲಾಗಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News