ಐಸಿಎಎಸ್‌ನ ಹಳೆ ವಿದ್ಯಾರ್ಥಿನಿಯಿಂದ ಗಿನ್ನಿಸ್ ವಿಶ್ವ ದಾಖಲೆ

Update: 2017-11-05 16:39 GMT

ಉಡುಪಿ, ನ.5: ಮಣಿಪಾಲ ವಿವಿಯ ಇಂಟರ್‌ನ್ಯಾಷನಲ್ ಸೆಂಟರ್ ಆಫ್ ಅಪ್ಲಾಯಡ್ ಸಾಯನ್ಸ್ (ಐಸಿಎಎಸ್)ನ ಹಳೆ ವಿದ್ಯಾರ್ಥಿನಿ ಮಾಲವಿಕಾ ವಶಿಷ್ಟ ಬಾಗೇಪಲ್ಲಿ ಅವರು, ಅಮೆರಿಕದಲ್ಲಿ ಸಂಶೋದನಾ ಕ್ಷೇತ್ರದಲ್ಲಿ ಮಾಡಿದ ಜೀವನದ ಮಹಾನ್ ಸಾಧನೆಯ ಮೂಲಕ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.

ಮಣಿಪಾಲ ಐಸಿಎಎಸ್‌ನಲ್ಲಿ 2010-12ನೇ ಸಾಲಿನ ಬಿ.ಎಸ್. ಮೆಕ್ಯಾನಿಕಲ್ ಇಂಜಿನಿಯರಿಂಗ್ ಬ್ಯಾಚ್‌ನ ವಿದ್ಯಾರ್ಥಿನಿಯಾದ ಮಾಲವಿಕಾ ಅವರನ್ನೊಳ ಗೊಂಡ ಅಮೆರಿಕಾದ ಅಟ್ಲಾಂಟದ ಜೋರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧನಾ ತಂಡ ಇತ್ತೀಚೆಗೆ ಹೊಸ ವಿಶ್ವ ದಾಖಲೆಯೊಂದನ್ನು ಮಾಡಿತ್ತು. ಅಮೆರಿಕದ ಈ ವಿವಿ, 2017ನೇ ಸಾಲಿನ ವಿಶ್ವ ವಿವಿ ರ್ಯಾಂಕಿಂಗ್‌ನಲ್ಲಿ 71ನೇ ರ್ಯಾಂಕ್ ಪಡೆದಿದೆ.

ಈ ತಂಡ 1200 ಡಿಗ್ರಿ ಸೆಂಟಿಗ್ರೇಡ್‌ನಿಂದ 1400 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ 72 ಗಂಟೆಗಳ ಕಾಲ ದ್ರವವಸ್ತುವನ್ನು ಸಂಗ್ರಹಿಸುವ ಹಾಗೂ ಪ್ರಹರಿಸುವ ಸಿರಾಮಿಕ್ ಆಧಾರದ ಮೆಕಾನಿಕಲ್ ಪಂಪ್ ಒಂದನ್ನು ವಿನ್ಯಾಸ ಗೊಳಿಸಿ ತಯಾರಿಸಿತ್ತು.

ಮಾಲವಿಕಾ ಅವರು ಮಣಿಪಾಲ ಐಸಿಎಎಸ್‌ನಲ್ಲಿ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದು, 4ಸಿಜಿಪಿಎ ಅಂಕಗಳಲ್ಲಿ 3.29ನ್ನು ಪಡೆದಿದ್ದರು. ಅವರು ಐಸಿಎಎಸ್‌ನಲ್ಲಿದ್ದಾಗ ಟ್ವಿನ್ನಿಂಗ್ ಇಂಜಿನಿಯರಿಂಗ್ ಕಾರ್ಯಕ್ರಮದಂತೆ ಅಮೆರಿಕದ ಪ್ರತಿಷ್ಠಿತ ಓಹಿಯೊ ಸ್ಟೇಟ್ ವಿವಿಗೆ ವರ್ಗಾವಣೆಗೊಂಡಿದ್ದರು. ಅನಂತರ ಅವರು ಅಟ್ಲಾಂಟದ ಜೋರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸಂಶೋಧನಾ ಸಹಾಯಕಿಯಾಗಿ ಸೇರ್ಪಡೆಗೊಂಡಿದ್ದರು.

ಮಾಲವಿಕಾ ಅವರು ಹೈದರಾಬಾದ್‌ನ ಉದ್ಯಮಿ ಬಿ.ಎನ್.ಮೋಹನ್ ಹಾಗೂ ಮಾಲತಿ ಮೋಹನ್ ದಂಪತಿ ಪುತ್ರಿ. ಮಾಲವಿಯಾ ಅವರ ಈ ಅತ್ಯುನ್ನತ ಸಾಧನೆಯಿಂದ ಮಣಿಪಾಲ ವಿವಿ ಹಾಗೂ ಐಸಿಎಎಸ್‌ಗೆ ಹೆಮ್ಮೆ ಎನಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ರಾಮಕೃಷ್ಣ ಎಸ್.ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News