×
Ad

ನವಯುಗ ಕಂಪೆನಿಯನ್ನು ತರಾಟೆಗೆ ಪಡೆದುಕೊಂಡ ಅಧಿಕಾರಿಗಳು

Update: 2017-11-05 22:26 IST

ಉಳ್ಳಾಲ, ನ. 5: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ. ಹಲವು ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ. ಹೆದ್ದಾರಿಯ ನಿರ್ವಹಣೆಯೇ ಸರಿಯಾಗಿ ಆಗುತ್ತಿಲ್ಲ. ಈ ನಡುವೆ ಸುಂಕ ಯಾವ ಆಧಾರದಲ್ಲಿ ಪಡೆಯುತ್ತಿದ್ದೀರಾ ?. ಒಟ್ಟು ಪ್ರಾಜೆಕ್ಟ್ ಕುರಿತ ವರದಿಯನ್ನು ಸೋಮವಾರ ತಂದು ತನ್ನ ಕೈಗೆ ನೀಡಿ. ಅದರಂತೆ ಕಾಮಗಾರಿ ನಡೆಯದೇ ಇದ್ದ ಪಕ್ಷದಲ್ಲಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ, ಕಂಪೆನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ರಾ.ಹೆ. ಕಾಮಗಾರಿ ಕೈಗೊಂಡ ನವಯುಗ ಕಂಪೆನಿ ಸಿಬ್ಬಂದಿಯನ್ನು ತರಾಟೆಗೆ ಪಡೆದುಕೊಂಡ ಘಟನೆ ರವಿವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಡೆಯಿತು.

ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ಶನಿವಾರ ಲಾರಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಜೀವನ್ ಪ್ರಕರಣಕ್ಕೆ ಸಂಬಂಧಿಸಿ ನಡೆದ ರಸ್ತೆ ತಡೆ ಹಿನ್ನೆಲೆಯಲ್ಲಿ ಸಾರ್ವಜನಿಕ ಮುಖಂಡರು, ಪೊಲೀಸರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರತ ಅಧಿಕಾರಿಗಳ ಸಮ್ಮುಖದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರವಿವಾರ ನಡೆಸಿದ ತುರ್ತು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಹೆದ್ದಾರಿ ಕಾಮಗಾರಿಯನ್ನು ಮುಗಿಸಲು ಸಾಧ್ಯವಾಗದಿದ್ದಲ್ಲಿ, ಟೋಲ್ ಪಡೆಯುವುದನ್ನು ನಿಲ್ಲಿಸುವುದರ ಜತೆಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಪ್ರಾಜೆಕ್ಟ್ ಪೂರ್ಣಗೊಳಿಸಲು ಅಸಾಧ್ಯ ಎಂದು ಬರೆದುಕೊಡಿ ಎಂದು ಹೇಳಿದರು. ಸಭೆ ಕರೆದ ಬಳಿಕ ದುರಸ್ತಿ ಕಾರ್ಯ ನಡೆಸುತ್ತೇನೆ ಅನ್ನುವವರಿಗೆ ಮುಂಚಿತವಾಗಿ ದುರಸ್ತಿ ಕಾರ್ಯ ನಡೆಸಲು ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಡಿಸಿಪಿ ಉಮಾ ಅವರು ಶನಿವಾರದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಕಾನೂನಿನಡಿ ಹೈವೇ ಪ್ಯಾಟ್ರಲಿಂಗ್ ವಾಹನ ಇರಬೇಕು. ಆದರೆ ನಂತೂರಿನಿಂದ ತಲಪಾಡಿವರೆಗೆ ಒಂದೂ ಪ್ಯಾಟ್ರಲಿಂಗ್ ಆಗಲಿ ಆಂಬ್ಯುಲೆನ್ಸ್ ವ್ಯವಸ್ಥೆಯೂ ಕಂಪೆನಿ ನಿರ್ವಹಿಸುತ್ತಿಲ್ಲ. ಆದರೂ ಸುಂಕ ವಸೂಲಿ ಮಾಡುವುದು ಕಾನೂನಿಗೆ ವಿರೋಧವಾಗಿದೆ. ಸೋಮವಾರ ಮಧ್ಯಾಹ್ನ ಒಳಗಡೆ ಕಾಮಗಾರಿ ನಿರತ ಪ್ರಾಜೆಕ್ಟ್ ಮೆನೇಜರ್ ಮತ್ತು ಸಿಬ್ಬಂದಿ ಪ್ರಾಜೆಕ್ಟ್ ವರದಿ ಸಮೇತ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ.

ಡಿಸೈನ್ ಬದಲಾವಣೆಯಿಂದ ವಿಳಂಬ: ನಂತೂರು ನಿಂದ ತಲಪಾಡಿವರೆಗೆ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡ ನವಯುಗ ಕಂಪೆನಿ ಇಂಜಿನಿಯರ್ ಹರೀಶ್ ಮಾತನಾಡಿ 2010 ರಿಂದ ಫ್ಲೈಓವರ್ ಕಾಮಗಾರಿ ಆರಂಭಿಸಲಾಗಿದೆ. ಆರಂಭದಲ್ಲಿ ಭೂಸ್ವಾಧೀನ ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲೂ ಹಿನ್ನೆಡೆಯಾಯಿತು. ತದನಂತರ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಫ್ಲೈಓವರ್ ಡಿಸೈನ್ ಬದಲಾವಣೆ ನಡೆಸಲಾಗಿತ್ತು. ಇದರಿಂದ ನೂತನ ಡಿಸೈನ್ ಮತ್ತು ಪ್ಲಾನಿಂಗ್ ಕಂಪೆನಿ ಕೈಸೇರಲು ವರ್ಷ ಕಳೆಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ರಾಝಿಕ್ ಉಳ್ಳಾಲ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತೀರಾ ನಿರ್ಲಕ್ಷ್ಯದಿಂದ ನಡೆಯುತ್ತಿದೆ. ಸಾರ್ವಜನಿಕರ ತೊಂದರೆಗಳಿಗೆ ಸ್ಪಂಧಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಕೋಟಿ ರೂ. ಪ್ರಾಜೆಕ್ಟನ್ನು ಕೇವಲ 14 ಕಾರ್ಮಿಕರು ನಿರ್ವಹಿಸುತ್ತಿರುವುದು ದುರದೃಷ್ಟಕರ. ಇಲ್ಲಿ ಹೆದ್ದಾರಿ ಅವ್ಯವಸ್ಥೆಯಿಂದ ಯುವಕರು ಜೀವಗಳನ್ನು ಕಳೆಯುತ್ತಲೇ ಇದ್ದಾರೆ. ಆದರೆ ಅತ್ತ ತಲಪಾಡಿಯಲ್ಲಿ ಸುಂಕ ವಸೂಲಿ ಕೇಂದ್ರದಲ್ಲಿ ರೌಡಿಗಳನ್ನು ನಿಲ್ಲಿಸಿ ಸುಂಕ ಸಂಗ್ರಹ ನಡೆಸಲಾಗುತ್ತಿದೆ. ಕಾಮಗಾರಿ ಮುಗಿಯದಿದ್ದರೂ ಸುಂಕ ವಸೂಲಿ ಮಾಡುತ್ತಿರುವುದರಲ್ಲಿ ನ್ಯಾಯಯುತವಲ್ಲ. ಎಲ್ಲಿಯೂ ಸೂಚನಫಲಕಗಳನ್ನು ಅಳವಡಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಕಲ್ಲಾಪು ಖಾಸಗಿ ಸಭಾಂಗಣದ ಎದುರುಗಡೆ ಡಿವೈಡರ್ ಏರಿ ಹಲವು ವಾಹನಗಳು ಅಪಘಾತಕ್ಕೀಡಾಗುತ್ತಿದೆ. ತೊಕ್ಕೊಟ್ಟು ಜಂಕ್ಷನ್ನಿನ ಅವ್ಯವಸ್ಥೆಯನ್ನು ಸೋಮವಾರ ಸಂಜೆಯೊಳಗೆ ದುರಸ್ತಿಗೊಳಿಸದೇ ಇದ್ದಲ್ಲಿ ಟೋಲ್ ಎದುರು ಕುಳಿತು ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದರು.

ತುರ್ತು ಕಾಮಗಾರಿಗೆ ನಿರ್ದೇಶಿಸಿದ ಸಂಚಾರಿ ಎಸಿಪಿ : ತೊಕ್ಕೊಟ್ಟುವಿನಲ್ಲಿ ಶನಿವಾರ ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಎಸ್.ಐ ಹಾಗೂ ಹೆದ್ದಾರಿ ಕಾಮಗಾರಿ ಅಧಿಕಾರಿಗಳ ಜತೆಗೆ ಭೇಟಿ ನೀಡಿ , ತೊಕ್ಕೊಟ್ಟು ಬಸ್ಸು ನಿಲ್ದಾಣಕ್ಕೆ ತೆರಳುವ ಜಾಗದಲ್ಲಿ ತಾತ್ಕಾಲಿಕ ಮಾರ್ಗವನ್ನು ತೆರವುಗೊಳಿಸುವಂತೆ ಸೂಚಿಸಿದರು. ಬಸ್ಸು ನಿಲ್ದಾಣ ಮತ್ತು ಹೆದ್ದಾರಿಯನ್ನು ಸಂಪರ್ಕಿಸುವ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಎಸ್.ಐಗಳಲ್ಲಿ ಸೂಚಿಸಿದರು. ಚರಂಡಿ ಮುಚ್ಚಿ ರಸ್ತೆಯನ್ನು ಅಗಲೀಕರಣಗೊಳಿಸಿ ಸೋಮವಾರ ಸಂಜೆಯೊಳಗಡೆ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.

ಈ ಸಂದರ್ಭ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ , ಪಶ್ಚಿಮ ಹಾಗೂ ಪೂರ್ವ ವಿಭಾಗ ಸಂಚಾರಿ ಠಾಣೆಯ ಎಸ್.ಐಗಳಾದ ಸುರೇಶ್ ಕುಮಾರ್ ಹಾಗೂ ಮೋಹನ್ ಕೊಟ್ಟಾರಿ, ಸ್ಥಳೀಯರಾದ ನಝೀರ್ ಮೊಯಿದಿನ್, ರವೀಂದ್ರ ಇನೋಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News