ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ
ಮಂಗಳೂರು, ನ. 5: ವಾಮಂಜೂರಿನಲ್ಲಿ ಮನೆನೆಕೆಲಸದ ಮಹಿಳೆಯೊಬ್ಬಳು ಸುಮಾರು 2.5ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆಗೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಡ್ಡೂರು ನಿವಾಸಿ ರೇಖಾ (24)ಬಂಧಿತ ಆರೋಪಿ.
ರೇಖಾ ವಾಮಂಜೂರಿನ ವಾಸವಾಗಿರುವ ಕಿರಣ್ ಕುಮಾರ್ ಎಂಬವರ ಫ್ಲ್ಯಾಟ್‌ನಲ್ಲಿ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು. ಕಿರಣ್ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಅವರ ಪತ್ನಿ ಹೊರಗೆ ಹೋದ ಸಂದರ್ಭ ಗೋದ್ರೆಜ್ ಕೀ ಬಳಸಿಕೊಂಡು ಚಿನ್ನ ಕಳವು ಗೈದಿದ್ದಳು ಎನ್ನಲಾಗಿದೆ. ಪ್ರಾರಂಭದಲ್ಲಿ ಕರಿಮಣಿ ಸರ ಕಳವು ಮಾಡಿದ ಆರೋಪಿ ಬಳಿಕ ಒಂದೊಂದೇ ಸರಗಳನ್ನು ಕಳವು ಮಾಡಿ ಸುಮಾರು 2.5ಲಕ್ಷ ರೂ. ಮೌಲ್ಯದ 12 ಪವನ್ ಕಳ್ಳತನ ಮಾಡಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಮನೆಯವರು ನ.1ರಂದು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅನುಮಾನದ ಮೇರೆಗೆ ಅಡ್ಡೂರಿನಲ್ಲಿ ವಾಸವಾಗಿರುವ ರೇಖಾಳನ್ನು ನ.2ರಂದು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು ಮಾಡಿರುವ ಚಿನ್ನಾಭರಣದಲ್ಲಿ ಕೆಲವು ಚಿನ್ನ ಫೈನಾನ್ಸ್‌ವೊಂದರಲ್ಲಿ ಅಡವಿರಿಸಿದ್ದರೆ, ಮತ್ತೆ ಕೆಲವು ಜುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದಳು. ಈಕೆಯಿಂದ 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.