×
Ad

ಉತ್ತಮ ಸಮಾಜಕ್ಕೆ ಕನಕದಾಸರ ಸಂದೇಶ ಪೂರಕ-ಎ.ಸಿ. ರಘುನಂದನ್ ಮೂರ್ತಿ

Update: 2017-11-06 16:49 IST

ಪುತ್ತೂರು, ನ.6: ಇಂದು ಸಮಾಜದಲ್ಲಿ ನಾನು, ನನ್ನಿಂದಲೇ ಎಂಬ ಭಾವನೆ ಮೇಳೈಸುತ್ತಿದ್ದು, ನಾನು ಎಂಬ ಅಹಂ ತೊಲಗಿ ಆ ಜಾಗದಲ್ಲಿ ನಾವು ಎಂಬ ಭಾವನೆ ಬೆಳಗಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಆದರ್ಶ ಅನುಷ್ಠಾನವಾಗಬೇಕಾದರೆ ದಾಸಶ್ರೇಷ್ಠರಾದ ಕನಕದಾಸರ ಸಂದೇಶ ನೆರವಾಗುತ್ತದೆ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಡಾ. ರಘುನಂದನ ಮೂರ್ತಿ ಹೇಳಿದರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಪುತ್ತೂರಿನ ಪುರಭವನದಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನಕದಾಸರು ನಮ್ಮ ನಾಡು ಕಂಡ ಶ್ರೇಷ್ಠ ದಾಸರು. ವ್ಯಾಸರಾಯರ ಶಿಷ್ಯರಾಗಿದ್ದ ಸಂದರ್ಭ ಅವರು ತೋರಿಸಿಕೊಟ್ಟ ಅಹಂ ನಿವಾರಣೆಯ ನಿರ್ದಶನ ಇಂದಿಗೂ ಜನಜನಿತ ಎಂದ ಅವರು ವ್ಯಕ್ತಿಯೊಬ್ಬ ಮಾಡುವ ಸಾಧನೆಯ ಹಿಂದೆ ಕುಟುಂಬ, ಸಮಾಜದ ನಾನಾ ರೀತಿಯ ಕೊಡುಗೆಗಳಿದ್ದರೂ ಅವೆಲ್ಲವನ್ನೂ ಮರೆತು ಎಲ್ಲವನ್ನೂ ನಾನೇ ಮಾಡಿದ್ದು, ಎಲ್ಲವೂ ನನ್ನಿಂದಲೇ ಆಗಿದ್ದು ಎಂಬ ಭಾವನೆ ವಿಜ್ರಂಭಿಸುತ್ತಿದೆ. ಈ ಅಹಂ ಭಾವನೆ ಸರಿಯಲ್ಲ .ಕನಕದಾಸರ ಸಂದೇಶಗಳನ್ನು ಅರ್ಥೈಸಿಕೊಂಡಲ್ಲಿ ಮಾತ್ರ ಈ ಅಹಂ ಭಾವನೆ ಸಮಾಜದಿಂದ ದೂರವಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಉಪ್ಪಿನಂಗಡಿ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೃಷ್ಣವೇಣಿ ರೈ ವಿಶೇಷ ಉಪನ್ಯಾಸ ನೀಡಿ ಕೀರ್ತನೆ ಮೂಲಕ ಸಂಗೀತ ಕ್ಷೇತ್ರಕ್ಕೆ, ಕಾವ್ಯದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕನಕದಾಸರು ತಮ್ಮ ಭಕ್ತಿ, ಮತ್ತು ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ರಾಜ ಮನೆತನದ ಸಖ್ಯದೊಂದಿಗೆ ಎಲ್ಲ ಶ್ರೀಮಂತ ಸೌಕರ್ಯಗಳಿದ್ದರೂ ಬುದ್ಧನಂತೆ ಅವೆಲ್ಲವನ್ನೂ ತ್ಯಾಗ ಮಾಡಿದ ಕನಕದಾಸರು, ಕೀರ್ತನೆಗಳ ಮೂಲಕ ಸಾಮಾನ್ಯ ಜನರನ್ನು, ಕಾವ್ಯಗಳ ಮೂಲಕ ಪಂಡಿತವರ್ಗವನ್ನು ಏಕಕಾಲದಲ್ಲಿ ಮುಟ್ಟಿದರು ಎಂದರು. ತಿಮ್ಮಪ್ಪ ನಾಯಕನಾಗಿದ್ದ ಇವರು ತಮಗೆ ಸಿಕ್ಕ ಕೊಪ್ಪರಿಗೆಯನ್ನು ದಾನ ಮಾಡುವ ಮೂಲಕ ಕನಕ ನಾಯಕನಾದರು. ತನ್ನೆಲ್ಲ ವೈಭೋಗ ತ್ಯಾಗ ಮಾಡುವ ಮೂಲಕ ಕನಕದಾಸರಾದರು ಎಂದ ಅವರು ನಾಡು ಕಂಡ 250ಕ್ಕಿಂತಲೂ ಅಧಿಕ ಹರಿದಾಸರ ಪೈಕಿ ಕನಕದಾಸರೊಬ್ಬರೇ ಶೂದ್ರ ವರ್ಗಕ್ಕೆ ಸೇರಿದವರು ಎಂದು ಅವರು ತಿಳಿಸಿದರು.

ಉಡುಪಿಯಲ್ಲಿ ಕನಕನ ಭಕ್ತಿಗೆ ಒಲಿದು ಕೃಷ್ಣನ ಮೂರ್ತಿ ಪಶ್ಚಿಮಕ್ಕೆ ತಿರುಗಿತು ಎಂಬ ಕತೆ ಜನಪದೀಯ ಮಾತ್ರ, ಇದಕ್ಕೆ ಸಮಕಾಲೀನ ಕಾವ್ಯಗಳಲ್ಲಿ, ಚರಿತ್ರೆ ಅಥವಾ ಶಾಸನಗಳಲ್ಲಿ, ಉಡುಪಿಯ ಚರಿತ್ರೆಯಲ್ಲೂ ಎಲ್ಲೂ ಪೂರಕ ದಾಖಲೆಗಳಿಲ್ಲ. ಕ್ರಿ.ಶ. 1238ರಲ್ಲಿ ಮಧ್ವಾಚಾರ್ಯರು ಕೃಷ್ಣನ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿಯೇ ಸ್ಥಾಪಿಸಿದರು ಎಂಬ ಐತಿಹ್ಯವೇ ಹೆಚ್ಚು ಶಕ್ತಿಶಾಲಿಯಾದುದು. ವಾದಿರಾಜರ ಕಾಲದ ನಂತರ ಕನಕನ ಕಿಂಡಿ ಎಂಬ ಕತೆ ಬಾಯಿ ಮಾತಿನ ಮೂಲಕ ಆರಂಭಗೊಂಡು ಪ್ರಚಾರ ಪಡೆಯಿತು ಎಂಬ ಐತಿಹ್ಯವಿದೆ ಎಂದು ಹೇಳಿದರು.

ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಅವರು ಅಧ್ಯಕ್ಷತೆ ವಹಿಸಿದ್ದರು. ನಗರ ಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿದರು.
ತಾಲೂಕು ರಾಷ್ಡ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಂಚಾಲಕರಾದ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಉಪಸ್ಥಿತರಿದ್ದರು.

ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಸ್ವಾಗತಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ವಂದಿಸಿದರು. ತಾಲೂಕು ಕಚೇರಿಯ ಸಿಬ್ಬಂದಿ ನಾಗೇಶ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News