ನ.26 : ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಹಿರಿಯರ ಕ್ರೀಡಾಕೂಟ
ಪುತ್ತೂರು, ನ. 6: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಿರಿಯರ ಕ್ರೀಡಾಕೂಟ ನ.26ರಂದು ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು, 30 ವರ್ಷ ಮೇಲ್ಪಟ್ಟ ವಯೋಮಾನದಿಂದ ಆರಂಭಗೊಂಡು 5 ವರ್ಷಗಳ ಅಂತರದ 12 ವಿವಿಧ ವಯೋ ವಿಭಾಗದಲ್ಲಿ ನಡೆಯುವ ಕೂಟದಲ್ಲಿ 12 ಬಗೆಯ ಪಂದ್ಯಾಟಗಳು ನಡೆಯಲಿವೆ. ಸುಮಾರು 600ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವರು ಎಂದು ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷ ಬಿ.ಕೆ. ಮಾಧವ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಹಿರಿಯ ಕ್ರೀಡಾಕೂಟ ಸಂಘಟನಾ ಸಮಿತಿ, ತಾಲ್ಲೂಕು ಹಿರಿಯರ ಕ್ರೀಡಾಸಂಘ ಕಾಣಿಯೂರು, ದಕ್ಷಿಣ ಕನ್ನಡ ಜಿಲ್ಲಾ ಹಿರಿಯರ ಕ್ರೀಡಾ ಸಂಘ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲ್ಲೂಕು ಯುವಜನ ಒಕ್ಕೂಟ ಪುತ್ತೂರು, ಚೈತನ್ಯ ಮಿತ್ರವೃಂದ ಪಡೀಲ್, ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗ, ಸವಣೂರು ಯುವಕ ಮಂಡಲ, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಕ್ರೀಡಾಕೂಟ ನಡೆಯಲಿದೆ. ನ.26ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನೆ ನಡೆದು ಬಳಿಕ ಸ್ಪರ್ಧೆಗಳು ಆರಂಭಗೊಳ್ಳಲಿದೆ ಎಂದರು.
30 ವರ್ಷ ಮೇಲ್ಪಟ್ಟಲ್ಲಿಂದ ವಯೋ ವಿಭಾಗ ಆರಂಭಗೊಳ್ಳುತ್ತದೆ. 90 ವರ್ಷ ಮೇಲ್ಪಟ್ಟವರಿಗೂ ಅವಕಾಶವಿದೆ. ಕ್ರೀಡಾಪಟುಗಳು ವಯಸ್ಸಿನ ದಾಖಲೆ ನೀಡಬೇಕಾಗುತ್ತದೆ. ಓಟ, ನಡಿಗೆ, ಉದ್ದಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಈಟಿ ಎಸೆತ ಮುಂತಾದ ಸ್ಪರ್ಧೆಗಳು ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆಯಲಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಇಲ್ಲಿನ ವಿಜೇತರು ಅರ್ಹರಾಗುತ್ತದೆ. ಈ ಬಾರಿ ರಾಷ್ಟ್ರ ಮಟ್ಟದ ಸ್ಪರ್ಧೆಯು ಮುಂದಿನ ಜನವರಿಯಲ್ಲಿ ಮೂಡುಬಿದರೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸರ್ಕಾರದ ಯಾವುದೇ ಅನುದಾನ ಅಥವಾ ಮಾನ್ಯತೆ ಇಲ್ಲದೆ ನಡೆಯುವ ಕ್ರೀಡಾಕೂಟ ಇದಾಗಿರುವ ಕಾರಣ ಹಣಕಾಸಿನ ಹೊಂದಾಣಿಕೆಯ ದೃಷ್ಟಿಯಿಂದ ಪ್ರತೀ ಸ್ಪರ್ಧಾಳುವಿನಿಂದ 300 ರೂ. ಪ್ರವೇಶಶುಲ್ಕ ಪಡೆಯಲಾಗುತ್ತದೆ. ಒಬ್ಬ ಕ್ರೀಡಾಪಟು ಗರಿಷ್ಠ 3 ಪಂದ್ಯಾಟಗಳಲ್ಲಿ ಭಾಗವಹಿಸಬಹುದಾಗಿದೆ. ವಿಜೇತರನ್ನು ಪ್ರಶಸ್ತಿ ಪತ್ರ ಹಾಗೂ ಪದಕದೊಂದಿಗೆ ಗೌರವಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಹಿರಿಯರ ಕ್ರೀಡಾಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಗಿರಿಶಂಕರ ಸುಲಾಯ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಂಘಟನಾ ಸಮಿತಿ ಉಪಾಧ್ಯ್ಷ ಮಾಮಚ್ಚನ್ ಉಪಸ್ಥಿತರಿದ್ದರು.