ಜಿಎಸ್‌ಟಿ ಅಂದರೆ ‘ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್’: ಮಮತಾ ಬ್ಯಾನರ್ಜಿ
ಕೋಲ್ಕತಾ, ನ. 6: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆರ್ಥಿಕತೆ ನಾಶಮಾಡಲು ಹಾಗೂ ಜನರಿಗೆ ಕಿರುಕುಳ ನೀಡಲು ಜಾರಿಗೊಳಿಸಲಾದ ಗ್ರೇಟ್ ಸೆಲ್ಫಿಸ್ ಟ್ಯಾಕ್ಸ್ (ಮಹಾ ಸ್ವಾರ್ಥದ ತೆರಿಗೆ) ಎಂದು ವ್ಯಾಖ್ಯಾನಿಸುವ ಮೂಲಕ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ನರೇಂದ್ರ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗದು ನಿಷೇಧ ವಿಪತ್ತು ಎಂದು ಹೇಳಿರುವ ಅವರು, ನಗದು ನಿಷೇಧದ ವಿರುದ್ಧ ಪ್ರತಿಭಟಿಸಲು ನವೆಂಬರ್ 8ರಂದು ಸಾಮಾಜಿಕ ಜಾಲ ತಾಣದ ಪ್ರೊಫೈಲ್ ಚಿತ್ರವನ್ನು ಕಪ್ಪು ಚೌಕವಾಗಿ ಪರಿವರ್ತಿಸಿ ಎಂದು ಆಗ್ರಹಿಸಿದ್ದಾರೆ.
ಜಿಎಸ್‌ಟಿ ಅಂದರೆ ಜನರಿಗೆ ಕಿರುಕುಳ ನೀಡುವ ಮಹಾ ಸ್ವಾರ್ಥದ ತೆರಿಗೆ (ಜಿಎಸ್‌ಟಿ-ಗ್ರೇಟ್ ಸೆಲ್ಫಿಸ್ ಟ್ಯಾಕ್). ಇದರಿಂದ ಉದ್ಯೋಗ ನಾಶವಾಗಿದೆ. ಉದ್ಯಮಕ್ಕೆ ತೊಂದರೆ ಉಂಟಾಗಿದೆ. ಗುರಿ ಮುಟ್ಟುವಲ್ಲಿ ಜಿಎಸ್‌ಟಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಗದು ನಿಷೇಧ ವಿಪತ್ತು. ಆರ್ಥಿಕತೆಯನ್ನು ನಾಶ ಮಾಡುವ ಈ ಹಗರಣದ ವಿರುದ್ಧ ನವೆಂಬರ್ 8ರಂದು ಕರಾಳ ದಿನ ಆಚರಿಸಿ. ಅಲ್ಲದೆ ನಮ್ಮ ಟ್ವಿಟ್ಟರ್‌ನ ಡಿಪಿಯನ್ನು ಕಪ್ಪು ಮಾಡೋಣ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.