ಮುಂದಿನ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ: ವೇಣುಗೋಪಾಲ್
ಕಾಪು, ನ.6 : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿವಿಧ ಯಶಸ್ವೀ ಯೋಜನೆಗಳಿಂದ ರಾಜ್ಯದ ಜನತೆಯನ್ನು ಒಗ್ಗೂಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರಕಾರವು ನೋಟು ಅಮಾನ್ಯೀಕರಣ, ಜಿಎಸ್‌ಟಿಗಳಂತಹಾ ಯೋಜನೆಗಳಿಂದ ಜನರನ್ನು ವಿಭಜಿಸಿ ಆಳುವುದರಲ್ಲಿ ಮಗ್ನವಾಗಿದೆ ಎಂದು ಕರ್ನಾಟಕ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ.
ಅವರು ಸೋಮವಾರ ಕಾಪು ರಾಜೀವ ಭವನದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ವೇಳೆ ಕಾಂಗ್ರೆಸ್ ಪಕ್ಷದ ಎಲ್ಲಾ ಬೂತ್ ಅಧ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು, ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ಇಲ್ಲದ ಪ್ರಧಾನಿ ನರೇಂದ್ರ ಮೋದಿಯವರ ಅಚ್ಚೇದಿನ್ ಕೇವಲ ಅಂಬಾನಿ ಮತ್ತು ಅದಾನಿಯಂತಹ ಬಂಡವಾಳ ಶಾಹಿಗಳಿಗೆ ಸಿಕ್ಕಿದೆ ಎಂದ ಅವರು, ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ರಾಜ್ಯದ ಚುನಾವಣೆಯು ಕಾಂಗ್ರೆಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಲಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆಯನ್ನೇರಲಿದ್ದು, 2019ರ ಸಂಸತ್ ಚುನಾವಣೆಯ ಬಳಿಕ ನಮ್ಮ ಯುವರಾಜ ರಾಹುಲ್ ಗಾಂಧಿಯವರು ಭಾರತದ ಪ್ರಧಾನಿಯಾಗಲಿರುವರು ಎಂದು ನುಡಿದರು.
ಮನೆಮನೆಗೆ ಕಾಂಗ್ರೆಸ್ ಭೇಟಿ ಯಶಸ್ವಿ ಕಾರ್ಯಕ್ರಮವಾಗಿದೆ. ಈ ಮೂಲಕ ಕಾಂಗ್ರೆಸ್ ಪ್ರತಿಯೋರ್ವರ ಮನೆಗೆ ತೆರಳಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಆಗುತ್ತಿದೆ. ಕಾಪು ಕ್ಷೇತ್ರದಲ್ಲಿ ಮನೆ, ಮನೆಗೆ ಭೇಟಿ ಕಾರ್ಯಕ್ರಮ ಪೂರ್ಣ ಪ್ರಮಾಣದ ಬೂತ್ ಸಮಿತಿಗಳನ್ನು ರಚಿಸಿಕೊಂಡು ಅತ್ಯಂತ ಯಶಸ್ವಿಗೊಳಿಸಿದ್ದು, ಶೇಕಡಾ 95ರಷ್ಟು ಪೂರ್ಣಗೊಳಿಸಲಾಗಿರುವುದನ್ನು ಶ್ಲಾಘಿಸಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಮೈಸೂರು ಲೋಕಸಭಾ ಕ್ಷೇತ್ರದ ಎರಡೂ ಉಪ ಚುನಾವಣೆಗಳನ್ನು ಸೋತಿರುವ ಬಿಜೆಪಿಯು ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕಾಗಲಿರುವ ಭರ್ಜರಿ ವಿಜಯವನ್ನು ಭಾರೀ ಮುಜುಗರದಿಂದ ಎದುರು ನೋಡಲಿದೆ. ಉಡುಪಿ ಜಿಲ್ಲೆಯ ಎಲ್ಲಾ 5 ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಲಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ವಿನಯ ಕುಮಾರ್ ಸೊರಕೆ, ವಿವಿಧ ರಾಜ್ಯ ನಾಯಕರು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಎ. ಬಾವ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ವೀಕ್ಷಕರಾದ ಬಸವರಾಜ್, ರಮಾನಂದ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ರಾಜ್ಯ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಮೋರ್ಚಾ ಅಧ್ಯಕ್ಷ ಪಾಲಯ್ಯ, ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕಾಧ್ಯಕ್ಷ ಸಚಿನ್ ಮೇಗರ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಬ್ಲಾಕ್ ಕಾಂಗ್ರೆಸ್(ಉತ್ತರ) ಅಧ್ಯಕ್ಷ ಸುಧೀರ್ ಹೆಗ್ಡೆ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶೋಕ್ ಕೊಡವೂರು, ಮೀನುಗಾರರ ಕಾಂಗ್ರೆಸ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ್ ಸಾಲ್ಯಾನ್, ಕಾರ್ಕಳ ವಿಧಾನಸಭಾ ಉಸ್ತುವಾರಿ ಎಂ. ಎಸ್. ಮಹಮ್ಮದ್, ಮಾಜಿ ಕೆಎಂಎಫ್ ಮಂಗಳೂರು ಅಧ್ಯಕ್ಷ ದಿವಾಕರ ಶೆಟ್ಟಿ, ಬೆಳಪು ಗ್ರಾ. ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತಿತರ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.