‘ಪುರಂದರದಾಸರ ಪವಾಡ ಒಪ್ಪುವ ಸನಾತನಿಗಳು ಕನಕನನ್ನು ಯಾಕೆ ಒಪ್ಪಲ್ಲ’
ಉಡುಪಿ, ನ.6: ಕನಕದಾಸರ ಭಕ್ತಿಗೆ ಕೃಷ್ಣ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿ ರುವುದನ್ನು ನಾನು ಸನ್ಯಾಸ ಪಡೆದಾಗಿನಿಂದ ಪ್ರತಿಪಾದಿಸುತ್ತಾ ಬಂದಿದ್ದೇನೆ. ಆದರೆ ಈ ಬಗ್ಗೆ ಕೆಲವು ಬುದ್ಧಿಜೀವಿಗಳು ಟೀಕಿಸುತ್ತಾರೆ ಮತ್ತು ಕೆಲವು ಸನಾತನಿ ಗಳೂ ಇದನ್ನು ಒಪ್ಪುವುದಿಲ್ಲ. ಪುರಂದರದಾಸರ ಹಾಗೂ ಮಧ್ವಾಚಾರ್ಯರ ಪವಾಡ ಒಪ್ಪುವ ಸನಾತನಿಗಳು, ಕನಕದಾಸರ ಪವಾಡ ಯಾಕೆ ಒಪ್ಪುವುದಿಲ್ಲ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ, ಪರ್ಯಾಯ ಪೇಜಾವರ ಮಠ ಶ್ರೀಕೃಷ್ಣ ಮಠ ಹಾಗೂ ಕನಕ ಸದ್ಬಾವನಾ ಜ್ಯೋತಿ ರಥಯಾತ್ರೆ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇಂದು ರಾಜಾಂಗಣದಲ್ಲಿ ಆಯೋಜಿಸ ಲಾದ ಜಗದ್ಗುರು ಕನಕದಾಸರ 530ನೆ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ವಾದಿರಾಜ ಆಚಾರ್ಯರು ಆ ಕಾಲದಲ್ಲಿ ರಚಿಸಿದ ಕನಕದಾಸರ ಕುರಿತ ಹಾಡುಗಳಲ್ಲಿ ಶ್ರೀಕೃಷ್ಣ ಕನಕದಾಸರ ಭಕ್ತಿಗೆ ಒಲಿದು ತಿರುಗಿದ್ದಾನೆ ಎಂಬ ವಿಚಾರ ವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದುದರಿಂದ ಈ ಪವಾಡ ನಡೆದಿರುವುದು ಸತ್ಯ.ಹೀಗಾಗಿ ಈ ವಿವಾದಕ್ಕೆ ಶಾಶ್ವತ ತೆರೆ ಎಳೆಯಬೇಕು ಎಂದು ಸ್ವಾಮೀಜಿ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕನಕ ದಾಸರ ಜನ್ಮ ಭೂಮಿ ಕಾಗಿನೆಲೆಯಾದರೆ, ಕರ್ಮ ಭೂಮಿ ಉಡುಪಿ. ದೇವರು ಒಲಿಯುವುದು ನಿರ್ಮಲ ಮನಸ್ಸಿನ ಭಕ್ತಿಗೆ ಹೊರತು ಹಣ ಸಂಪತ್ತಿಗಲ್ಲ. ಇದಕ್ಕೆ ಕನಕದಾಸರೇ ನಮ್ಮ ಮುಂದೆ ಇರುವ ದೊಡ್ಡ ಉದಾರಣೆ ಎಂದರು.
ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಬಿ.ಶಿವ ರಾಮ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಶ್ರೀಉಮಾಶಂಕರ ಸ್ವಾಮೀಜಿ ಬೆಂಗಳೂರು, ರಥಯಾತ್ರೆ ಸಮಿತಿಯ ರಾಜ್ಯಾಧ್ಯಕ್ಷ ಓಂ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಸಾಹಿತಿ, ಚೊಕ್ಕನಹಳ್ಳಿ ಮಹೇಶ್, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ನಗರಸಭೆ ಸದಸ್ಯ ಯುವರಾಜ್, ಹಾಲುಮತ ಯುವ ವೇದಿಕೆಯ ಗೌರವಾಧ್ಯಕ್ಷ ಸಿದ್ಧರಾಜು ಕೆ.ಎಸ್., ಸಮಾಜ ಸೇವಕ ನಿತ್ಯಾನಂದ ಒಳಕಾಡು, ವಿಜಯ ಕುಮಾರ್ ಹಾಸಂಗಿ ಉಪಸ್ಥಿತರಿದ್ದರು.
ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಸ್ವಾಗತಿಸಿದರು. ಅಧ್ಯಕ್ಷ ಹನುಮಂತ ಡೊಳ್ಳಿನ ವಂದಿಸಿದರು. ಬೀರಪ್ಪ ಹುನಿ ಚಾಳ ಕಾರ್ಯಕ್ರಮ ನಿರೂಪಿಸಿದರು.