‘ಗುಡಿ ನಿರ್ಮಿಸದಿದ್ದರೆ ಕನಕದಾಸರ ಕುರುಹೇ ಇರುತ್ತಿರಲಿಲ್ಲ’
ಉಡುಪಿ, ನ.5: ಉಡುಪಿಯಲ್ಲಿ ಕನಕದಾಸರಿಗೆ ಶ್ರೀಕೃಷ್ಣ ದರ್ಶನ ನೀಡಿದ ಸ್ಥಳದಲ್ಲಿ ಕನಕದಾಸರಿಗೆ ಗುಡಿಯನ್ನು ನಿರ್ಮಾಣ ಮಾಡಿದವರು ದಿ.ಮಲ್ಪೆ ಮಧ್ವರಾಜರು. ಇಲ್ಲದಿದ್ದರೆ ಕನಕದಾಸರ ಒಂದು ಕುರುಹು ಕೂಡ ಮಠದ ಸುತ್ತಮುತ್ತ ಇರುತ್ತಿರಲಿಲ್ಲ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಗೋವಿಂದ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನಕದಾಸರು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತ ವಾಗಿಲ್ಲ. ಅವರು ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಕನಕದಾಸರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಜಾತೀಯತೆ ಹಾಗೂ ಅಂಕು ಡೊಂಕು ಗಳನ್ನು ತಿದ್ದುವ ಕೆಲಸ ಮಾಡಿದರು. ಕನಕದಾಸರು ನೀಡಿರುವ ಮಾರ್ಗದರ್ಶನ ಇಡೀ ದೇಶಕ್ಕೆ ಪ್ರಸ್ತುತ ಎಂದರು.
ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ಮಾತ ನಾಡಿ, ಸಂತ, ದಾರ್ಶನಿಕ, ಕವಿ, ಭಕ್ತ, ವಿಮರ್ಶಕ, ಸಮಾಜ ಸುಧಾರಕ, ಜನಪದ ಕಲಾವಿದ, ತತ್ವಜ್ಞಾನಿಯಾಗಿರುವ ಕನಕದಾಸರದ್ದು ಬಹುಮುಖ ವ್ಯಕ್ತಿತ್ವ. ಹಾಡಿನ ಮೂಲಕ ಜಾತಿ ಮತದ ಗೋಡೆ ಕೆಡವಿ ಎಲ್ಲರೂ ಒಂದೇ ಎನ್ನುವ ಸಂದೇಶವನ್ನು ಕನಕದಾಸರು ಸಾರಿದರು ಎಂದು ತಿಳಿಸಿದರು.
ವ್ಯಕ್ತಿಯ ವ್ಯಕ್ತಿತ್ವ ಅಹಂಕಾರದಿಂದ ನಿರಸನಗೊಳ್ಳುವ ದೃಷ್ಟಿಯಿಂದ ಅಂತರಂಗ ವಿಮರ್ಶೆಯೊಂದಿಗೆ ಸಮಾಜದ ವಿಮರ್ಶೆ ಮಾಡಿರುವ ಕುರಿತು ಅರಿಯ ಬೇಕಾಗಿದೆ. ಅಂತರಂಗ ಮತ್ತು ಬಹಿರಂಗದ ಒತ್ತಡಗಳನ್ನು ಮೀರಿ ಹೇಗೆ ಪರಿಶುದ್ದ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬಹುದು ಎಂಬುದಕ್ಕೆ ಕನಕದಾಸರು ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಎಂ.ಪಾಟೀಲ್, ಜಿಪಂ ಸಿಇಒ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ಹೆಚ್ಚುವರಿ ಎಸ್ಪಿಕುಮಾರ ಚಂದ್ರ ಉಪಸ್ಥಿತರಿದ್ದರು.
ಕನಕದಾಸ ಜಯಂತಿ ಪ್ರಯುಕ್ತ ಡಯಟ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಕನಕ ಸಾಹಿತ್ಯ ಲೋಕ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಯ್ಯ ಸ್ವಾಗತಿಸಿದರು. ಕನಕ ದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ವಂದಿಸಿ ದರು. ಗಣೇಶ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.