ಹೋರಾಟಗಾರರು ನಮ್ಮ ಸಂಸ್ಕೃತಿಯ ಕಡೆಗೆ ಮುಖ ಮಾಡಬೇಕು: ಪ್ರೊ. ಪುರುಷೋತ್ತಮ ಬಿಳಿಮಲೆ

Update: 2017-11-06 18:20 GMT

ಮಂಗಳೂರು, ನ. 6: ಮಂಗಳೂರಿನ ಬಲ್ಮಠದ ಸಹೋದಯದಲ್ಲಿ ಡಿವೈಎಫ್ಐ  ಇಂದು ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎನ್ ಯು  ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಜನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ಉಪನ್ಯಾಸ ನೀಡಿದರು. 

ತುಳುನಾಡಿನ ಸಂಸ್ಕೃತಿಯ ಬಹುಮುಖ್ಯ ಭಾಗಗಳಾದ ದೈವ, ಭೂತ ಹಾಗೂ ಯಕ್ಷಗಾನ ಕಲೆಗಳ ಕುರಿತು, ಕಳೆದ ಒಂದೆರಡು ದಶಕಗಳಿಂದೀಚೆ ಅವುಗಳಲ್ಲಿ ಉಂಟಾದ ಬದಲಾವಣೆಗಳ ಕುರಿತು ಬಿಳಿಮಲೆಯವರು ಮಾತನಾಡಿದರು. 

ಕಳೆದ ನೂರು ವರ್ಷಗಳಲ್ಲಿ ತುಳುನಾಡಿನಲ್ಲಿ ಉಂಟಾದ ಬದಲಾವಣೆಗಿಂತ ಕಳೆದ 25 ವರ್ಷಗಳಲ್ಲಿ ತುಳುನಾಡಿನಲ್ಲಿ ಉಂಟಾದ ಬದಲಾವಣೆ ಹೆಚ್ಚು ವೇಗದ್ದು, ಎಂದು ಅವರು ಅಭಿಪ್ರಾಯಪಟ್ಟರು.

ಹೋರಾಟಗಾರರು ನಮ್ಮ ಸಂಸ್ಕೃತಿಯ ಕಡೆಗೆ ಮುಖ ಮಾಡಿ, ಅದರ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು, ಅನಂತರ ಹೋರಾಟದಲ್ಲಿ ತೊಡಗಿಕೊಳ್ಳುವುದು ಅಗತ್ಯ ಎಂದು ಅವರು ಕಿವಿಮಾತು ಹೇಳಿದರು. 

ಕೇವಲ ಎರಡರಿಂದ ಮೂರು ಶೇಕಡಾದಷ್ಟು ಜನರು ಬ್ರಿಟಿಷ್ ವಸಾಹತುಷಾಹಿ ಕಾಲದಲ್ಲಿ ಕುಳಿತು ಕಟ್ಟಿದ ಚರಿತ್ರೆಯನ್ನು ಸಂಸ್ಕೃತಿ ಎನ್ನಲಾಗುತ್ತಿದೆ. ಆದರೆ ದೇಶದ ಶೇಕಡಾ 97ರಷ್ಟು ಜನ ಮೌಖಿಕವಾಗಿ ಉಳಿಸಿಕೊಂಡು ಹರಡುತ್ತಾ ಬಂದ ಜ್ಞಾನವನ್ನು ಕಡೆಗಣಿಸಲಾಗಿದೆ. ವೈದಿಕರು ಮತ್ತು ವಸಾಹತುಷಾಹಿ ಕುಳಿತು ಬರೆದಿಟ್ಟ ಜ್ಞಾನಕ್ಕಿಂತ, ನಮ್ಮ ಹೊಸತಲೆಮಾರು ಈ ದೇಶದ 97 ಭಾಗದಷ್ಟು ಜನರು ಕಾಯ್ದುಕೊಂಡು ಬಂದಿರುವ ಜ್ಞಾನವನ್ನು ಅರಿಯುವುದು ಬಹಳ ಮುಖ್ಯ ಎಂದು ಬಿಳಿಮಲೆ ತಿಳಿಸಿದರು. 

ನಮ್ಮ ಜನಪದ ಕಾವ್ಯಗಳು ಜನಸಾಮಾನ್ಯರ ಕಥೆ ಹೇಳುತ್ತದೆ. ಕೊರಗ ತನಿಯನ ಕಥೆಯನ್ನೇ ನೋಡಿ. ಅದರ ಕೇಂದ್ರ ಹಸಿವು. ನಮ್ಮ ದೈವಗಳು, ನಮ್ಮ ಭೂತಗಳು ಜನಸಾಮಾನ್ಯರು ದೈವತ್ವಕ್ಕೇರಿದ ಕಥನಗಳು. ರಾಮಕೃಷ್ಣರು ಹುಟ್ಟಿದಾಗ ಅವರ ಮೇಲೆ ಪುಷ್ಟಪವೃಷ್ಟಿಯಾದಂತೆ ಕೊರಗ ತನಿಯನ ಮೇಲೆ ಆಗುವುದಿಲ್ಲ. ಆತ ಹಸಿವಿನಿಂದ ಆಹಾರ ಹುಡುಕಿ ಹೊರಟು ದೇವಸ್ಥಾನದಲ್ಲಿ ಸಿಕ್ಕ ಹಣ್ಣನ್ನು ತಿಂದು ದೈವವಾಗುವ ಸಾಮಾನ್ಯ ವ್ಯಕ್ತಿ. ಹಾಗೆಯೇ ಕಲ್ಕುಡ ಕಲ್ಲುಡ್ತಿಯರು ಕೂಡಾ. ಅವರು ಯಾವ ದೇವರ ಅವತಾರವೂ ಅಲ್ಲ. ಅನ್ಯಾಯಕ್ಕೆ ಒಳಗಾಗಿ, ಸಿಡಿದೆದ್ದವರು. ಸತ್ತು ಸೇಡು ತೀರಿಸಿಕೊಂಡು ದೈವವಾದವರು. ಇಂಥ ಕಥನಗಳು ನಮ್ಮ ಅಧ್ಯಯನದ ಭಾಗವಾಗಬೇಕು ಎಂದು ಪುರುಷೋತ್ತಮ ಬಿಳಿಮಲೆಯವರು ಹೇಳಿದರು.

ಘೋಷಿತ ಧರ್ಮಗಳು ಲೌಕಿಕವನ್ನು ನಿರಾಕರಿಸುತ್ತವೆ. ಜನಪದ ಧರ್ಮಗಳು ಲೌಕಿಕವನ್ನು ಸರಿಪಡಿಸಲು ಯತ್ನಿಸುತ್ತವೆ. ನಾವು ಅವನ್ನು ಅನುಸರಿಸುವ ಮೂಲಕ ಲೌಕಿಕವನ್ನು ಸರಿಪಡಿಸುವ ಭಾಗವಾಗಬೇಕು ಎಂದು ಅವರು ಕರೆ ನೀಡಿದರು. 

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿವೈಎಫ್ಐನ ಸಂತೋಷ್ ಬಜಾಲ್, ಬಿಕೆ ಇಮ್ತಿಯಾಝ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News