ಗಾಂಜಾ ಮಾರಾಟ: ಆರೋಪಿಗಳ ಬಂಧನ
ಮಂಗಳೂರು, ನ. 6: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ಸ್ ಕ್ರೈಂ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡು ಉಪ್ಪಳಗೇಟ್ ಸಮೀಪದ ಶಾರದಾನಗರ ನಿವಾಸಿ ಕಿರಣ್(24) ಮತ್ತು ಕಾಸರಗೋಡು ಮಜಿಬೈಲು ಕೆಳಗಿನ ಮನೆಯ ನಿತಿನ್ ಕುಮಾರ್ ಯಾನೆ ಉದಯಕುಮಾರ್ ರಾವ್(43) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸೋಮೇಶ್ವರ ಗ್ರಾಮದ ತೊಕೊಟ್ಟು ಶಿವಾಜಿ ಸಮಿತಿ ಸ್ವಾಮಿ ಕೊರಗಜ್ಜ ಕಟ್ಟೆ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಳಿಯಿದ್ದ 37,700 ರೂ. ಮೌಲ್ಯದ 2.275 ಕೆ.ಜಿ.ಗಾಂಜಾ, 2 ಬೈಕ್, 5 ಮೊಬೈಲ್ ಫೋನ್, 3,500 ರೂ. ನಗದು ಸಹಿತ ಒಟ್ಟು 1,01,700 ಮೊತ್ತದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಮುಹಮ್ಮದ್ ಷರೀಫ್, ಪೋಲೀಸ್ ಉಪ ನಿರೀಕ್ಷಕರಾದ ಲತಾ ಕೆ.ಎನ್. ಮತ್ತು ಸಿಬ್ಬಂದಿ ಜಗದೀಶ್, ಶಾಜು ನಾಯರ್, ಶ್ರೀಲತಾ, ಜಾಯ್ಸಾ, ಕಿಶೋರ್ ಪೂಜಾರಿ ಮತ್ತು ಬಾಸ್ಕರ ಪಾಲ್ಗೊಂಡಿದ್ದರು.