×
Ad

ಮೂಡುಬಿದಿರೆ ಮೂಲದ ಅಬ್ದುಲ್ ಸಮೀ ಪ್ರಥಮ

Update: 2017-11-06 21:28 IST

ಮಂಗಳೂರು, ನ.6: ಬಹರೈನ್ ನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ಬಹರೈನ್ ಸೂಪರ್‌ಸ್ಪೋರ್ಟ್ ಚಾಂಪಿಯನ್‌ಶಿಪ್ (ಬಿಎಸ್‌ಎಸ್‌ಪಿ) ಬೈಕ್ ರೇಸಿಂಗ್‌ನಲ್ಲಿ ಭಾಗಹಿಸಿದ ಅತಿ ಕಿರಿಯ ಬೈಕ್ ರೈಡರ್ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಮೂಲದ ದುಬೈ ನಿವಾಸಿ ಅಬ್ದುಲ್ ಸಮೀ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಹರೈನ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್ (ಬಿಐಸಿ) ಮತ್ತು ಬಹರೇನ್ ಮೋಟಾರ್ ಫೆಡರೇಶನ್ (ಬಿಎಂಎಫ್) ಸಹಯೋಗದಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ವಿಶ್ವದ ವಿವಿಧ ದೇಶಗಳ 15 ಮಂದಿ ಸ್ಪರ್ಧಿಗಳಲ್ಲಿ  17ರ ಹರೆಯದ ಅಬ್ದುಲ್ ಸಮೀ ಅತ್ಯಂತ ಕಿರಿಯ ಸ್ಪರ್ಧಿ ಹಾಗೂ ವಿಜೇತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಮೀ ದುಬೈನ ಕೇಂಬ್ರಿಜ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 12ನೆ ತರಗತಿಯಲ್ಲಿದ್ದಾರೆ.

ನಾಸಿರ್ ಸೈಯದ್ ಮತ್ತು ಅನಿಲಾ ದಂಪತಿಯ ಸುಪುತ್ರ ಅಬ್ದುಲ್ ಸಮೀ. ನಾಸಿರ್  ಸೈಯದ್ ಮೂಲತಃ ಮೂಡುಬಿದಿರೆಯವರು. ಇವರ ತಂದೆ ಸೈಯದ್ ಮೊಯ್ದಿನ್ ಈಗ ಮಂಗಳೂರಿನಲ್ಲೇ ನೆಲೆಸಿದ್ದಾರೆ.  ಅಂತಾರಾಷ್ಟ್ರೀಯ ಬೈಕ್ ರೇಸರ್ ಆಗಿಯೂ ಗುರುತಿಸಿಕೊಂಡಿರುವ ನಾಸಿರ್ ಸೈಯದ್ ದುಬೈನ ಹೆಸರಾಂತ ಉದ್ಯಮಿ ಕೂಡಾ. ಅಂತಾರಾಷ್ಟ್ರೀಯ ಬೈಕ್ ರೇಸ್‌ಗಳಲ್ಲಿ ಚಾಂಪಿಯನ್ ಆಗಿ ಮಿಂಚುತ್ತಿರುವ ನಾಸಿರ್, ಸೂಪರ್ ಬೈಕ್ ಎಂದೇ ಗುರುತಿಸಲಾಗುವ 600 ಸಿಸಿ ಶಕ್ತಿಯ ಸ್ಪೋಟ್ಸ್ ಮಾಡೆಲ್ ಬೈಕ್‌ಗಳಲ್ಲಿ ಪ್ರತಿ ಗಂಟೆಗೆ 250 ಕಿ.ಮೀ.ಗಿಂತ ಅಧಿಕ ವೇಗದಲ್ಲಿ ಬೈಕ್ ಚಲಾಯಿಸುವ ನೈಪುಣ್ಯತೆ ಹೊಂದಿದವರು.

 

(ತಂದೆ ನಾಸಿರ್ ಸೈಯದ್ ರೊಂದಿಗೆ ಚಾಂಪಿಯನ್ ಅಬ್ದುಲ್ ಸಮೀ)

ಯುಎಇ ಸೂಪರ್‌ ಬೈಕ್ ಚಾಂಪಿಯನ್‌ಶಿಪ್ ಮತ್ತು ಬಹರೈನ್ ಸೂಪರ್‌ ಬೈಕ್ ಚಾಂಪಿಯನ್‌ಶಿಪ್‌ಗಳಲ್ಲಿ ರಾಷ್ಟ್ರೀಯ ಮಟ್ಟದ ರೇಸರ್ ಆಗಿರುವ ತನ್ನ ತಂದೆಯ ಹಾದಿಯಲ್ಲೇ ಮುಂದುವರಿದಿರುವ ಅಬ್ದುಲ್ ಸಮೀ ಇದೀಗ ಬಹರೇನ್‌ನಲ್ಲಿ ಅತೀ ಕಿರಿಯ ಹಾಗು ಯಶಸ್ವಿ ಬೈಕ್ ರೈಡರ್ ಆಗಿ ಹೊರಹೊಮ್ಮಿದ್ದಾರೆ.

ಸ್ಪಧೆಯಲ್ಲಿ ಭಾಗವಹಿಸಿದ್ದ ಇತರ ಸ್ಪರ್ಧಿಗಳೆಲ್ಲರೂ 28ರಿಂದ 50 ವರ್ಷದೊಳಗಿನವರಾಗಿದ್ದು, 17ರ ಹರೆಯದ ಅಬ್ದುಲ್ ಸಮೀ ಬೈಕ್ ರೇಸ್‌ನಲ್ಲಿ ಅಪ್ಪನಂತೆ ಮಗನೂ ಚಾಂಪಿಯನ್ ಎಂಬುದನ್ನು ಇದೀಗ ಸಾಬೀತು ಪಡಿಸಿದ್ದಾರೆ.

ಮೋಟಾರ್ ಸ್ಪೋರ್ಟ್ ಜಗತ್ತಿನಲ್ಲಿ ಬಿಎಸ್‌ಎಸ್‌ಪಿ ಚಾಂಪಿಯನ್‌ಶಿಪ್ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ. ಮೈ ನವಿರೇಳಿಸುವ ಬೈಕ್ ರೇಸಿಂಗ್‌ಗೆ ಈ ಸ್ಪರ್ಧೆ ಹೆಸರುವಾಸಿ.

ಗೋಕಾರ್ಟಿಂಗ್‌ ನಿಂದ ಪ್ರಾರಂಭಿಸಿ ಬೈಕ್ ರೇಸ್ ಆಸಕ್ತಿ ಬೆಳೆಸಿಕೊಂಡ ಅಬ್ದುಲ್ ಸಮೀ, 2013ರಲ್ಲಿ ರೂಕೀಸ್ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದರು. 2014ರಲ್ಲಿ ರಮಝಾನ್ ಚಾಲೆಂಜ್ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ತಂದೆಯ ಜತೆ ರೇಸಿಂಗ್ ಮಾಡಿ ತಂದೆಯ ಎದುರು ರನ್ನರ್ ಅಪ್  ಆಗಿದ್ದರು. 2015ರಲ್ಲಿ ಅಲ್‌ಐನ್ ರೇಸ್‌ವೇನಲ್ಲಿ ಆರು ಗಂಟೆಗಳ ರೇಸಿಂಗ್‌ನಲ್ಲಿ ಭಾಗವಹಿಸಿದ್ದರು.

2016ರಲ್ಲಿ ದುಬೈನಲ್ಲಿ ನಡೆದ ಎಮಿರೇಟ್ಸ್ ಸ್ಕೂಲ್ ಕಾರ್ಟಿಂಗ್ ಕಪ್ ಸ್ಪರ್ಧೆಯಲ್ಲಿ 6ನೆ ಓವರ್‌ಆಲ್ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿದ್ದರು. ಮಾತ್ರವಲ್ಲದೆ 2017ರಲ್ಲಿ ಅಲ್‌ಐನ್‌ನಲ್ಲಿ ಸ್ಟೂಡೆಂಟ್ಸ್ ಕಾರ್ಟಿಂಗ್ ಕಪ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.

ಬೈಕ್ ರೇಸಿಂಗ್ ಚಾಂಪಿಯನ್ ಆಗುವ ಕನಸು
ತನ್ನ ತಂದೆಯ ಬೈಕ್ ರೇಸಿಂಗ್ ನೋಡಿಕೊಂಡೇ ಬೆಳೆದ ಅಬ್ದುಲ್ ಸಮೀಯವರಿಗೆ ತಾನೂ ಬೈಕ್ ರೇಸರ್ ಆಗಬೇಕೆಂಬ ಬಯಕೆ ಹುಟ್ಟಿಕೊಂಡಿತ್ತು. ಸಾಹಸ ಹಾಗೂ ಅಪಾಯಕಾರಿ ಕ್ರೀಡೆಯಾಗಿಯೇ ಗುರುತಿಸಿಕೊಳ್ಳುವ ಈ ಬೈಕ್ ರೇಸಿಂಗ್‌ಗೆ ತಂದೆಯ ಬೆಂಬಲವೂ ಸಿಕ್ಕಿ  2015ರಲ್ಲಿ ಮೋಟಾರ್‌ಕ್ರಾಸ್ ತರಬೇತಿಯನ್ನು ಪಡೆದರು. ಜತೆಗೆ ಜೆಬೆಲ್ ಅಲಿ ಡಿಎಂಎಂಕ್ಸ್ ಟ್ರ್ಯಾಕ್‌ನಲ್ಲಿ ತರಬೇತಿ, ತಾಲೀಮು ಪ್ರಾರಂಭಿಸಿದರು.

ಮುಂದೆ ತನ್ನ ಓದಿನ ಜತೆ ಜತೆಯಲ್ಲೇ ಜಗತ್ತಿನ ವಿವಿಧೆಡೆ ಬೈಕ್ ರೇಸ್‌ಗಳಲ್ಲಿ  ಮಿಂಚಿ ಇನ್ನಷ್ಟು ಚಾಂಪಿಯನ್ ಶಿಪ್ ಗಳನ್ನು ಗೆಲ್ಲುವುದು ಅಬ್ದುಲ್ ಸಮೀ ಗುರಿ.

ಎಪ್ರಿಲಿಯ ಆರ್ ಎಸ್ 125 ಬೈಕ್

ಕಳೆದ ಎರಡೂವರೆ ದಶಕಗಳಿಂದ ಅಂತಾರಾಷ್ಟ್ರೀಯ ಬೈಕ್ ರೇಸರ್ ಗಳ ನೆಚ್ಚಿನ ಬೈಕ್ ಬ್ರ್ಯಾಂಡ್ ಎಂದೇ ಹೆಸರು ಪಡೆದ ಬೈಕ್ ಇದು. ಅಬ್ದುಲ್ ಸಮೀ ಇದೇ ಪ್ರತಿಷ್ಠಿತ ಬೈಕ್ ನಲ್ಲಿ ಬಹರೈನ್ ನಲ್ಲಿ ಚಾಂಪಿಯನ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News