ಕನಕ ಜಯಂತಿಗೆ ರಜೆ ನೀಡದ ಶಾಲೆ ವಿರುದ್ಧ ಪ್ರತಿಭಟನೆ
ಉಡುಪಿ, ನ.6: ಕನಕ ಜಯಂತಿ ದಿನವಾಗಿರುವ ಇಂದು ರಜೆ ನೀಡದೆ ತರಗತಿ ನಡೆಸುತ್ತಿದ್ದ ನಿಟ್ಟೂರಿನ ಆಂಗ್ಲ ಮಾಧ್ಯಮ ಶಾಲೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆಯಂತೆ ಮಧ್ಯಾಹ್ನದ ಬಳಿಕ ಶಾಲೆಗೆ ರಜೆ ನೀಡಲಾಯಿತು.
ಕನಕ ಜಯಂತಿಗೆ ಸರಕಾರಿ ರಜೆ ಇದ್ದರೂ ಶಾಲೆಯಲ್ಲಿ ತರಗತಿ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಕರವೇ ಕಾರ್ಯಕರ್ತರು ಪ್ರತಿ ಭಟನೆಗೆ ಸಜ್ಜಾದರು. ಈ ಬಗ್ಗೆ ಶಾಲೆಯನ್ನು ಸಂಪರ್ಕಿಸಿದಾಗ ನಮಗೆ ಕಡ್ಡಾಯ ರಜೆ ನೀಡಬೇಕೆಂಬ ನೋಟೀಸ್ ಇಲಾಖೆಯಿಂದ ಬಂದಿಲ್ಲ ಎಂದ ಉತ್ತರ ಬಂತು. ಈ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದರು.
ಕೂಡಲೇ ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ನಾಗೇಶ್ ಶ್ಯಾನುಭಾಗ್‌ರನ್ನು ಸಂಪರ್ಕಿಸಿ ಶಾಲೆಗೆ ರಜೆ ನೀಡು ವಂತೆ ಆಡಳಿತ ಮಂಡಳಿಗೆ ತಿಳಿಸುವಂತೆ ಸೂಚಿಸಿದರು. ಅದರಂತೆ ಶಾಲೆಗೆ ತೆರಳಿದ ನಾಗೇಶ್ ಶ್ಯಾನುಭಾಗ್ ಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಹಾಗೂ ಕಾರ್ಯಕರ್ತರು ಕೂಡ ಶಾಲೆಗೆ ತೆರಳಿ ರಜಾ ದಿನ ತರಗತಿ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪ್ರಾಂಶುಪಾಲರೊಂದಿಗೆ ಮಾತಿನ ಚಕಮಕಿ ನಡೆಯಿತು. ಇದಕ್ಕೆ ಮಣಿದ ಶಾಲಾ ಆಡಳಿತ ಮಂಡಳಿಯು ಮಧ್ಯಾಹ್ನ ಬಳಿಕ ಶಾಲೆಗೆ ರಜೆ ಘೋಷಿಸಿತು.