ಕೆಲಸದಿಂದ ಕಾರ್ಮಿಕರ ವಜಾ: ಸುಜ್ಲಾನ್ ಕಾರ್ಮಿಕರಿಂದ ಪ್ರತಿಭಟನೆ
ಪಡುಬಿದ್ರೆ, ನ. 7: ಇಲ್ಲಿನ ನಂದಿಕೂರಿನಲ್ಲಿರುವ ಕಾರ್ಯಾಚರಿಸುತಿರುವ ಪವನ ವಿದ್ಯುತ್‌ನ ಬಿಡಿಭಾಗ ತಯಾರಿಕಾ ಘಟಕ ಸುಜ್ಲಾನ್ ಕಂಪೆನಿಯ ಗುತ್ತಿಗೆ ಆಧಾರದಲಿರುವ ಕಾರ್ಮಿಕರನ್ನು ಏಕಾಏಕಿ ವಜಾಗೊಳಿಸುತ್ತಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರದಿಂದ ಕಾರ್ಮಿಕರು ಪ್ರತಿಭಟನೆ ನಡಸುತಿದ್ದು, ಮಂಗಳವಾರ ಇವರ ಪ್ರತಿಭಟನೆಗೆ ಬೆಂಬಲವಾಗಿ ಕಾರ್ಮಿಕ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಪ್ರತಿಭಟನನಿರತರು ಕಂಪೆನಿ ವಿರುದ್ಧ ಘೋಷಣೆ ಕೂಗಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಕಳೆದ ನಾಲ್ಕು ತಿಂಗಳ ಹಿಂದೆ 750ಕ್ಕೂ ಅಧಿಕ ಕಂಪೆನಿಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರನ್ನು ವಜಾಗೊಳಿಸಲಾಗಿತ್ತು. ಆ ಬಳಿಕ ನಡೆದ ಪ್ರತಿಭಟನೆಯಿಂದ 250 ಮಂದಿಯನ್ನು ಮತ್ತೆ ಸೇರ್ಪಡೆಗೊಳಿಸಿದರು. ಇದೀಗ ಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿ ನಿರತರಾದವರನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲವರನ್ನು ವಜಾಗೊಳಿಸುತಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದರು.
ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಮಾರ್ಚ್‌ವರೆಗೆ ಕೆಲಸ ಇರುವುದಾಗಿ ಹೇಳಲಾಗಿತ್ತು. ಆದರೆ ಇದೀಗ ಡಿಸೆಂಬರ್‌ವರೆಗೆ ಮಾತ್ರ ಕೆಲಸ ಇರುವುದಾಗಿಯೂ ಆ ಬಳಿಕ ಕೆಲಸ ಇಲ್ಲ ಎಂಬುವುದನ್ನು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಕಾರ್ಮಿಕರು ತಿಳಿಸಿದ್ದು, ಈ ಹಿನ್ನೆಲೆ ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದೇವೆ ಎಂದಿದ್ದಾರೆ. ಈ ಮಧ್ಯೆ ಕಂಪೆನಿ ಕಾರ್ಮಿಕರು, ಕಾರ್ಮಿಕರ ಮುಖಂಡರು, ಅಧಿಕಾರಿಗಳ ಮಾತುಕತೆ ನಡೆಯುತ್ತಿದೆ. ಕೆಲ ಪ್ರತಿಭಟನನಿರತರು ಕಂಪೆನಿ ಗೇಟ್ ಮುಂದೆ ಟಯರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳ ಇಬ್ಬಾಗ: ಸುಜ್ಲಾನ್ ಕಂಪೆನಿಯ ಕಾರ್ಮಿಕರಲ್ಲಿ ಎರಡು ಕಾರ್ಮಿಕ ಸಂಘಟನೆಗಳಾಗಿ ಇಬ್ಭಾಗವಾಗಿದ್ದು, ಒಂದು ಕಾರ್ಮಿಕ ಸಂಘಟನೆಯ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದನ್ನು ವಿರೋಧಿಸಿ 15 ದಿನಗಳಿಂದ ಪ್ರತಿಭಟನೆ ನಡೆಸುತಿದ್ದರು. ಈ ವೇಳೆ ಪ್ರತಿಭಟನನಿರತರಿಗೆ ಅನ್ನಹಾರ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ.
ಪ್ರತಿಭಟನೆಯಿಂದ ಕೆಲ ಕಾರ್ಮಿಕರು ಸೋಮವಾರ ರಾತ್ರಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಆ ಬಳಿಕ ರಾತ್ರಿ ನಡೆದ ಮಾತುಕತೆಯಲ್ಲಿ ಕಾರ್ಮಿಕರ ಬೇಡಿಕೆ ಈಡೇರಿಸಲಾಗಿದ್ದು, ಕಂಪೆನಿ ಕಾರ್ಮಿಕರು ಪ್ರತಿಭಟನೆ ಹಿಂದೆಗೆದುಕೊಂಡಿದ್ದಾರೆ. ಆದರೆ ಗುತ್ತಿಗೆ ಆಧಾರದ ಕಾರ್ಮಿಕರು ತಮ್ಮ ಬೇಡಿಕೆ ಈಡೇರಸಿವವರೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ರಕ್ಷಣಾ ವೇದಿಕೆಯ ರವಿ ಶೆಟ್ಟಿ, ಅನ್ಸಾರ್ ಅಹ್ಮದ್, ಸಿ.ಪಿ.ಅಬ್ದುಲ್ ರಹ್ಮಾನ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.