×
Ad

ನ.11: ನೆಹರು ಮೈದಾನಕ್ಕೆ ಆಗಮಿಸಲಿದೆ ಪರಿವರ್ತನಾ ರಥ

Update: 2017-11-07 16:37 IST

ಮಂಗಳೂರು, ನ.7: ರಾಜ್ಯದಲ್ಲಿ ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನ.2ರಂದು ಆರಂಭಗೊಂಡಿರುವ ನವ ಕರ್ನಾಟಕದ ನಿರ್ಮಾಣಕ್ಕಾಗಿ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಯ ರಥ ನ.11ರಂದು ಸಂಜೆ 5.30 ಗಂಟೆಗೆ ನಗರದ ನೆಹರು ಮೈದಾನಕ್ಕೆ ಆಗಮಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ ನ. 2ರಿಂದ ಆರಂಭಗೊಂಡಿರುವ ಬೈಕ್ ರ್ಯಾಲಿ ಜನವರಿ 28ವರೆಗೆ ನಡೆಯಲಿದೆ. ಈ ಪರಿವರ್ತನಾ ರ್ಯಾಲಿ 73 ದಿನಗಳಲ್ಲಿ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದೆ.

ನವೆಂಬರ್ 8ರಂದು ಗುಂಡ್ಯದ ಮೂಲಕ ಜಿಲ್ಲೆಯನ್ನು ಪ್ರವೇಶಿಸಲಿದೆ.ನ.8ಮತ್ತು 9ರಂದು ಮಡಿಕೇರಿಯಲ್ಲಿ ನಿಷೇದಾಜ್ಞೆ ಜಾರಿ ಇರುವ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ತಂಗಲಿದೆ. ನವೆಂಬರ್ 10ರಂದು ಬೆಳಗ್ಗೆ 11 ಗಂಟೆಗೆ ಸುಳ್ಯದ ಚೆನ್ನ ಕೇಶವ ದೇವಸ್ಥಾನದ ಬಳಿ, 3 ಗಂಟೆಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ, ಸಂಜೆ 5.30 ಗಂಟೆಗೆ ಬೆಳ್ತಂಗಡಿಯ ಪ್ರಸನ್ನ ಕಾಲೇಜು ಮೈದಾನದಲ್ಲಿ, ನವೆಂಬರ್ 11ರಂದು ಬೆಳಗ್ಗೆ 11 ಗಂಟೆಗೆ ಬಂಟ್ವಾಳ, ಗಂಟೆಗೆ ನಾರಾಯಣಗುರು ಮಂದಿರದ ಬಳಿಯ ಮೈದಾನದಲ್ಲಿ ,3 ಗಂಟೆಗೆ ಮೂಡಬಿದ್ರೆ ಸ್ವರಾಜ್ ಮೈದಾನ ಮತ್ತು ಸಂಜೆ 5.30 ಗಂಟೆಗೆ ಮಂಗಳೂರು (ಕೇಂದ್ರ ಮೈದಾನ ಕ್ಕೆ)ನೆಹರೂ ಮೈದಾನದಲ್ಲಿ ಮೂರು ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ಮುಖಂಡರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ. ಈ ಪರಿವರ್ತನಾ ರ್ಯಾಲಿ ರಾಜ್ಯದಲ್ಲಿ 2008 -13ರಲ್ಲಿ ಬಿಜೆಪಿ ನೇತೃತ್ವದ ಸರಕಾರದ ಸಾಧನೆ ಹಾಗೂ ಹಾಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರದ ಆಡಳಿತದಲ್ಲಿನ ಸಾಧನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು ಈ ಪರಿವರ್ತನಾ ರ್ಯಾಲಿ ಹೊಂದಿದೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದ ವೈಫಲ್ಯವನ್ನು ಜನತೆಯ ಮುಂದಿಡುವ ಉದ್ದೇಶವನ್ನು ರ್ಯಾಲಿ ಹೊಂದಿದೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಆರು ಕಡೆಗಳಲ್ಲಿ ನಡೆಯುವ ರ್ಯಾಲಿಯಲ್ಲಿ ಪಕ್ಷಕ್ಕೆ ಹೊಸ ಸೇರ್ಪಡೆ ನಡೆಯಲಿದೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರ್ಯಾಲಿಯ ಸಂಚಾಲಕರಾದ ಉಮಾನಾಥ ಕೋಟ್ಯಾನ್,ಬಿಜೆಪಿ ಮುಖಂಡರಾದ ಯೋಗೀಶ್ ಭಟ್,ಹಾಗೂ ಇತರ ಪದಾಧಿಕಾರಿಗಳಾದ ಬ್ರಿಜೇಶ್ ಚೌಟ, ಕಿಶೋರ್ ರೈ, ಸತ್ಯಜಿತ್ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News