ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಡಿಸಿ, ಸರಕಾರಕ್ಕೆ ಪತ್ರ: ಸೊರಕೆ
ಉಡುಪಿ, ನ.7: ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆಯಲ್ಲಿ ಇಂದು ಉಡುಪಿ ತಾಪಂ ಸಭಾಂಗಣದಲ್ಲಿ ಕರೆಯಲಾದ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್ ಗೈರು ಹಾಜರಿಯಿಂದಾಗಿ ಮುಂದೂಡಲಾಯಿತು.
ಉಡುಪಿಯ ಪ್ರಭಾರ ತಹಶೀಲ್ದಾರ್ ಆಗಿರುವ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಶಿರಿಯಾರ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆ ಯಲ್ಲಿ ಭಾಗವಹಿಸಿರುವ ಮತ್ತು ಉಡುಪಿ ತಾಪಂ ಪ್ರಭಾರ ಕಾರ್ಯನಿರ್ವ ಹಣಾಧಿಕಾರಿಯಾಗಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ರಾಜ್ ತಿವೆಂಡ್ರಮ್‌ನಲ್ಲಿ ನಡೆಯುತ್ತಿರುವ ಕೃಷಿ ತರಬೇತಿಯಲ್ಲಿ ಪಾಲ್ಗೊಂಡಿ ರುವ ಹಿನ್ನೆಲೆಯಲ್ಲಿ ಕೆಡಿಪಿ ಸಭೆಗೆ ಗೈರು ಹಾಜರಾಗಿದ್ದರು.
ಬೆಳಗ್ಗೆ 11ಗಂಟೆಗೆ ನಡೆಯಬೇಕಾಗಿದ್ದ ಸಭೆಗೆ ಆಗಮಿಸಿದ ಶಾಸಕ ವಿನಯ ಕುಮಾರ್ ಸೊರಕೆ, ‘ಸಭೆಯಲ್ಲಿ ಪ್ರಗತಿ ಪರಿಶೀಲನೆ ಮಾಡಬೇಕಾದ ಇಬ್ಬರು ಪ್ರಮುಖ ಅಧಿಕಾರಿಗಳು ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಸಭೆಯನ್ನು ಸದ್ಯಕ್ಕೆ ಮುಂದೂಡಲಾಗುವುದು ಎಂದು ತಿಳಿಸಿದರು.
ಈ ಇಬ್ಬರು ಅಧಿಕಾರಿಗಳಿಗೆ 10 ದಿನಗಳ ಮೊದಲೇ ಸಭೆಯಲ್ಲಿ ಪಾಲ್ಗೊಳ್ಳು ವಂತೆ ಪತ್ರ ಬರೆಯಲಾಗಿತ್ತು. ಆದರೂ ಅವರಿಬ್ಬರು ಸಭೆಯಲ್ಲಿ ಪಾಲ್ಗೊಳ್ಳದೆ ಗೈರು ಹಾಜರಾಗಿರುವ ಕುರಿತು ಜಿಲ್ಲಾಧಿಕಾರಿಗಳು ಗಮನಕ್ಕೆ ತರಲಾಗುವುದು ಮತ್ತು ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಸೊರಕೆ ಅಸಮಾ ಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್, ಜಿಪಂ ಸದಸ್ಯ ಸುಧಾಕರ್ ಶೆಟ್ಟಿ, ತಾಪಂ ಸಹಾಯಕ ಯೋಜನಾ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಹಾಜರಿದ್ದರು.