ದಿಲ್ಲಿ: ಗಂಭೀರ ಸ್ಥಿತಿಗೆ ತಲುಪಿದ ವಾಯು ಮಾಲಿನ್ಯ

Update: 2017-11-07 15:16 GMT

 ಹೊಸದಿಲ್ಲಿ, ನ. 7: ಜಗತ್ತಿನ ಅತ್ಯಧಿಕ ಮಾಲಿನ್ಯದ ನಗರವಾದ ದಿಲ್ಲಿಯಲ್ಲಿ ಉಸಿರುಗಟ್ಟಿಸುವ ದಟ್ಟ ಹೊಗೆ ಆವರಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗಳಿಗೆ ಕೆಲವು ದಿನ ರಜೆ ಸಾರುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದಾರೆ.

ಶಾಲೆಗಳನ್ನು ಕೆಲವು ದಿನ ಮುಚ್ಚುವಂತೆ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರಿಗೆ ತಿಳಿಸಿರುವುದಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಪ್ರತಿವರ್ಷ ಈ ಸಮಯದಲ್ಲಿ ‘ದಿಲ್ಲಿ ಗ್ಯಾಸ್ ಚೇಂಬರ್ ಆಗಿ ಬದಲಾಗುತ್ತದೆ’ ಎಂದು ಕೇಜ್ರಿವಾಲ್ ಬಣ್ಣಿಸಿದ್ದಾರೆ.

ಅತ್ಯಧಿಕ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಓಟಗಾರರು ಹಾಗೂ ಸ್ವಯಂಸೇವಕರನ್ನು ರಕ್ಷಿಸಲು ಭಾರತೀಯ ವೈದ್ಯಕೀಯ ಅಸೋಸಿಯೇಶನ್ ನವೆಂಬರ್ 19ರಂದು ಆಯೋಜಿಸಿರುವ ವಾರ್ಷಿಕ ಅರ್ಧ ಮ್ಯಾರಥಾನ್ ಅನ್ನು ರದ್ದುಗೊಳಿಸಿದೆ.

 ನಿವಾಸಿಗಳು ಇಂದು ಬೆಳಗ್ಗೆ ಎದ್ದಾಗ ದಟ್ಟ ಕಂದು ಬಣ್ಣದ ಮಬ್ಬು ತುಂಬಿಕೊಂಡಿತ್ತು. ಇದರಿಂದ ಅವರು ಕಣ್ಣು ನೋವು, ಮೂಗು ಹಾಗೂ ಗಂಟಲಿನ ಕಿರಿಕಿರಿ ಅನುಭವಿಸಿದರು.

ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ದಿಲ್ಲಿಯ ವಾಯು ಗುಣಮಟ್ಟ ಗಂಭೀರವಾಗಿದೆ. ಈ ಮಾಪನದ ಗರಿಷ್ಟ ಮಟ್ಟ 500. ಅದರಲ್ಲಿ 451 ದಾಖಲಾಗಿದೆ. ಈ ಮಟ್ಟ 100ಕ್ಕಿಂತ ಹೆಚ್ಚಾಗಿದ್ದರೆ, ಅದು ಅನಾರೋಗ್ಯಕರ ಎಂದು ಕೇಂದ್ರ ಮಾಲಿನ್ಯ ಮಂಡಳಿ ಹೇಳುತ್ತದೆ.

 ದಿಲ್ಲಿಯ ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ತುಂಬಾ ಕಳಪೆಯಾಗಿದೆ. ಅದು ಗರಿಷ್ಠ ಮಟ್ಟವನ್ನು ಮೀರಿದೆ ಎಂದು ಅಮೆರಿಕ ರಾಯಭಾರಿ ಕಚೇರಿಯ ರಿಯಲ್-ಟೈಮ್ ವಾಯು ಗುಣಮಟ್ಟ ಸೂಚ್ಯಂಕ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News