ತಾಕತ್ತಿದ್ದರೆ ಖಾಸಗಿ ವಾಹನಕ್ಕೂ ವೇಗ ನಿಯಂತ್ರಕ ಆಳವಡಿಸಿ: ರಘುಪತಿ ಭಟ್ ಸವಾಲು
ಮಣಿಪಾಲ, ನ.7: ಹಳೆ ಸಾರಿಗೆ ವಾಹನಗಳಿಗೂ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಅಳವಡಿಸುವುದನ್ನು ಸರಕಾರ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ, ಈ ಆದೇಶವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಹಾಗೂ ಇತರ ಸಂಘಟನೆಗಳ ವತಿಯಿಂದ ಪ್ರತಿಭಟನಾ ರ್ಯಾಲಿ ಹಾಗೂ ಆರ್‌ಟಿಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಪ್ರತಿಭಟನಕಾರರು ಮಣಿಪಾಲ ಟೈಗರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಅಲ್ಲಿರುವ ಆರ್‌ಟಿಓ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಾರಿಗೆ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಅಸೋಸಿಯೇಶನ್‌ನ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಸಾರಿಗೆ ಇಲಾಖೆಯ ಅಧಿಕಾರಿಗಳು ವೇಗ ನಿಯಂತ್ರಕ ಕಂಪೆನಿ ನೀಡುವ ಲಂಚದ ಹಣಕ್ಕೆ ಬಾಯೊಡ್ಡಿ ಅಸಂಬದ್ಧ ನಿಯಮಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮೂಲಕ ಕಾನೂನು ಬದ್ಧವಾಗಿ ಕಾರ್ಯಾಚರಿಸುವ ಟ್ಯಾಕ್ಸಿಗಳನ್ನು ನಡೆಸುವವರ ಕುಟುಂಬದ ಹೊಟ್ಟೆಗೆ ತಣ್ಣೀರೆರಚುವ ಕೆಲಸವಾಗುತ್ತಿದೆ. ನಿಮಗೆ ತಾಕತ್ತಿದ್ದರೆ ಖಾಸಗಿ ವಾಹನಗಳಿಗೂ ವೇಗ ನಿಯಂತ್ರಕ ಆಳವಡಿಸಿ ಎಂದು ರಘುಪತಿ ಭಟ್ ಸಾರಿಗೆ ಇಲಾಖಾಧಿಕಾರಿಗಳಿಗೆ ಸವಾಲು ಹಾಕಿದರು.
ಸಮೀಕ್ಷೆಯೊಂದರ ಪ್ರಕಾರ ಅತಿ ಹೆಚ್ಚು ಅಪಘಾತಗಳು ಸಂಭವಿಸುವುದು ಖಾಸಗಿ ವಾಹನಗಳಿಂದ. ಆದರೆ ಸಾರಿಗೆ ಸಚಿವರು ಮಾತ್ರ ಟ್ಯಾಕ್ಸಿ ವಾಹನಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಟ್ಯಾಕ್ಸಿಮೆನ್‌ಗಳು 2 ವರ್ಷದ ತರಬೇತಿ ಬಳಿಕವೇ ಮಾನ್ಯತಾ ಬ್ಯಾಜ್ ಪಡೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನೀವು ಯಾವುದೋ ಅಮಿಷಕ್ಕೆ ಮಣಿದು ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಸಾರಿಗೆ ಸಚಿವ ರೇವಣ್ಣ ಅವರು ಈ ನಿರ್ಧಾರ ವನ್ನು ಹಿಂದಕ್ಕೆ ಪಡೆದರೆ ಅವರನ್ನು ಉಡುಪಿಗೆ ಕರೆಸಿ ಸನ್ಮಾನ ಮಾಡಲಾಗುವುದು ಎಂದು ಭಟ್ ನುಡಿದರು.
14 ಕಂಪೆನಿಗಳಿಗೂ ನೀಡಿ: ಕೇಂದ್ರ ಸರಕಾರ 14 ಕಂಪೆನಿಗಳ ಸ್ಪೀಡ್ ಗವರ್ನರ್ ಯಂತ್ರದ ಆಳವಡಿಕೆಗೆ ಅನುಮತಿ ನೀಡಿದ್ದು, ಆದರೆ ರಾಜ್ಯ ಸರಕಾರ ಕೇವಲ ಎರಡು ಕಂಪೆನಿಗಳ ವೇಗನಿಯಂತ್ರಕವನ್ನು ಮಾತ್ರ ಅಳವಡಿಸುವಂತೆ ಆದೇಶದಲ್ಲಿ ತಿಳಿಸಿದೆ. ಇದರಿಂದ ಟ್ಯಾಕ್ಸಿಮೆನ್‌ಗಳಿಗೆ ಸುಮಾರು 16 ಸಾವಿರ ರೂ. ಹೊರೆ ಬೀಳುತ್ತದೆ. ಇದಕ್ಕಾಗಿ ಚಾಲಕರು ತಮಗೆ ಬೇಕಿದ್ದ ಕಂಪೆನಿಯ ಸ್ಪೀಡ್‌ಗವರ್ನರ್ ಅಳವಡಿಸಲು ಅವಕಾಶ ನೀಡಬೇಕು ಎಂದವರು ಒತ್ತಾಯಿಸಿದರು.
ಇಲ್ಲವೇ ಹೋದರೆ ಉಡುಪಿಯ ಜಿಲ್ಲೆಯ ಯಾವ ಟ್ಯಾಕ್ಸಿಮೆನ್‌ಗಳೂ ವೇಗ ನಿಯಂತ್ರಕ ಅಳವಡಿಸಿಕೊಳ್ಳದೇ ಇಲಾಖೆಯ ಆದೇಶದ ಉಲ್ಲಂಘನೆ ಮಾಡಲಿದ್ದಾರೆ. ಇದರಿಂದ ಮುಂದಾಗುವ ಅನಾಹುತಗಳಿಗೆ ನೀವೇ ನೇರ ಹೊಣೆಯಾಗುತ್ತೀರಿ ಎಂದವರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಆರ್‌ಟಿಒ ಆಗಮನಕ್ಕೆ ಪಟ್ಟು: ಇಂದು ನಾವು ಪ್ರತಿಭಟನೆ ನಡೆಸುವ ಬಗ್ಗೆ ಎರಡು ದಿನಗಳ ಮೊದಲೇ ತಿಳಿಸಿದ್ದೆವು. ಈ ಪ್ರತಿಭಟನೆಯನ್ನು ರಾಜಕೀಯ ಉದ್ದೇಶಕ್ಕೆ ಅಥವಾ ಕಾಟಾಚಾರಕ್ಕೆ ಮಾಡುವುದಲ್ಲ. ಆರ್‌ಟಿಒ ಅಧಿಕಾರಿ ಸ್ಥಳಕ್ಕೆ ಬಂದು ನಮ್ಮ ಮನವಿ ಸ್ವೀಕರಿಸಿ ಭರವಸೆ ನೀಡದ ಹೊರತು ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ಸಹಾಯಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಅವರೆದುರು ಪ್ರತಿಟನಾಕಾರರು ಸ್ಪಷ್ಟವಾಗಿ ಸಾರಿದರು.
ಕೊನೆಗೂ ಅಪರಾಹ್ನ 1:00ಗಂಟೆ ಸುಮಾರಿಗೆ ಆರ್‌ಟಿಒ ಅಧಿಕಾರಿ ರಮೇಶ್ ವರ್ಣೇಕರ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ಈ ವಿಷಯದಲ್ಲಿ ನಮ್ಮಿಂದಾಗುವ ಪ್ರಯತ್ನ ನಾವು ಮಾಡುತ್ತೇವೆ. ನಿಮ್ಮ ಬೇಡಿಕೆಯನ್ನು ಇಲಾಖೆಯ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಚದುರಿದರು.
ಇಂದಿನ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಪಂ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಪ್ರಮುಖರಾದ ರಮೇಶ್ ಕೆ. ಕೋಟ್ಯಾನ್ ಕಟಪಾಡಿ, ಪ್ರಕಾಶ್ ಅಡಿಗ, ಜಯ ಪೂಜಾರಿ, ಲಿಯೋ ಫರ್ನಾಂಡಿಸ್ ಕಾರ್ಕಳ, ಮಹೇಶ್ ಕುಮಾರ್, ಪಿ.ಹರಿದಾಸ್ ಭಟ್, ಸುರೇಶ್, ರಾಘವೇಂದ್ರ ಸೋಮಯಾಜಿ, ಬಾರ್ಕೂರು ಗೋಪಾಲ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.