ಹರೇಕಳ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿವೈಎಫ್‌ಐ ಧರಣಿ
ಕೊಣಾಜೆ, ನ. 7: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 10 ಲಕ್ಷ ಹಾಗೂ ಸಿದ್ದರಾಮಯ್ಯ ಅವರು 15 ಲಕ್ಷ ಮನೆಗಳನ್ನು ರಾಜ್ಯದಲ್ಲಿ ನಿರ್ಮಿಸಿ ಬಡವರಿಗೆ ನೀಡುವ ಬಗ್ಗೆ ಘೋಷಿಸಿದ್ದರು. ಆದರೆ ಹರೇಕಳ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಮನೆ ನಿರ್ಮಾಣವಾಗಿಲ್ಲ. 2002ರಲ್ಲಿ ಮೀಸಲಿಡಲಾಗಿದ್ದ ಜಮೀನಿನಲ್ಲಿ ಹೈಟೆನ್ಷನ್ ತಂತಿ ಹಾದುಹೋಗಿರುವುದರಿಂದ ನಿಷ್ಪ್ರಯೋಜಕವಾಗಿದೆ. ಇದೀಗ ಡಿವೈಎಫ್‌ಐ ಧರಣಿ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿರುವ ಅರ್ಹರನ್ನು ಗುರುತಿಸುವ ಕೆಲಸ ಸಂಘಟನೆ ಮಾಡಲಿದೆ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾರ್ ಅವರು ಹೇಳಿದರು.
ಅವರು ಹರೇಕಳ ಪಂ. ಎದುರು ನಿವೇಶನ ರಹಿತರ ಪಟ್ಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಡಿವೈಎಫ್‌ಐ ವತಿಯಿಂದ ಮಂಗಳವಾರ ನಡೆದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2001ರಲ್ಲೇ ತಹಸೀಲ್ದಾರ್ ನಿವೇಶನ ಮಂಜೂರು ಮಾಡಲಾಗಿದ್ದರೂ ಫಲಾನುಭವಿಗಳಿಗೆ ಸಿಕ್ಕಿಲ್ಲ, ಡಿವೈಎಫ್‌ಐ ಬೇಡಿಕೆಯಂತೆ 576 ಅರ್ಜಿದಾರರ ಪೈಕಿ 131 ಮಂದಿ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ, ಇದು ಹೋರಾಟಕ್ಕೆ ಸಂದ ಒಂದು ಹಂತದ ಜಯವಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ ಸಂತಸ ವ್ಯಕ್ತಪಡಿಸಿದರು.
ಹರೇಕಳ ಗ್ರಾಮದಲ್ಲಿ ನಿವೇಶನರಹಿತರ ಹರೇಕಳ ಗ್ರಾಮ ಪಂ. ಮುಂಭಾಗ ಡಿವೈಎಫ್‌ಐ ಅಹೋರಾತ್ರಿ ಅನಿರ್ಧಿಷ್ಠಾವಧಿ ಧರಣಿಗೆ ಮುಂದಾಗಿತ್ತು. ಆದರೆ ಮಂಗಳೂರು ಕಂದಾಯಾಧಿಕಾರಿ ಸ್ಟೀಫನ್ ಅವರು ಮನವಿಯ ಈ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂದೆಗೆದುಕೊಳ್ಳಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಉಮರಬ್ಬ, ಜನಾರ್ದನ, ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ನಿವೇಶನರಹಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಂತೋಷ್, ಡಿವೈಎಫ್‌ಐ ಹರೇಕಳ ಗ್ರಾಮಾಧ್ಯಕ್ಷ ಅಶ್ರಫ್ ಹರೇಕಳ, ಘಟಕಾಧ್ಯಕ್ಷ ನಿಝಾಮ್, ವಲಯ ಸಮಿತಿ ಸದಸ್ಯ ಹನೀಫ್, ಕೊಜಪಾಡಿ ಘಟಕಾಧ್ಯಕ್ಷ ನಝೀರ್, ನ್ಯೂಪಡ್ಪು ಘಟಕಾಧ್ಯಕ್ಷ ಹನೀಫ್, ದಲಿತ ಮುಖಂಡ ಸಂಕಪ್ಪ, ಲತೀಫ್ ನ್ಯೂಪಡ್ಪು, ಸಿದ್ದೀಕ್ ನ್ಯೂಪಡ್ಪು, ಸಕೀನ ಇನ್ನಿತರರು ಭಾಗವಹಿಸಿದ್ದರು.