ಸುಧೀರ್ ಶೆಟ್ಟಿಗೆ ‘ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ’
ಮಂಗಳೂರು, ನ. 7: ‘ಪಿಂಗಾರ’ ವತಿಯಿಂದ ಪ್ರತಿ ವರ್ಷ ನೀಡಲಾಗುವ ‘ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ’ಯು ಈ ಬಾರಿ ಯುಎಇ ಎಕ್ಸ್‌ಚೇಂಜ್‌ನ ಸಿಇಒ ವೈ.ಸುಧೀರ್ ಕುಮಾರ್ ಶೆಟ್ಟಿ ಅವರಿಗೆ ಮಂಗಳವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಡಾ.ಅಲೋಶಿಯಸ್ ಪೌಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಪೂರ್ವಾಧ್ಯಕ್ಷ ಹಾಗೂ ಪಿಂಗಾರ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ರೋಯ್ ಕ್ಯಾಸ್ತಲಿನೊ, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್‌ನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ರೆ,ಫಾ.ಡೆನಿಸ್ ಪ್ರಭು, ಶಾಸಕ ಜೆ.ಆರ್.ಲೋಬೊ ಉಪಸ್ಥಿತರಿದ್ದರು.
ರೋಯ್ ಕ್ಯಾಸ್ತಲಿನೊ ಮಾತನಾಡಿ, ‘ಪಿಂಗಾರ’ ಬಳಗವು ಕಳೆದ 12 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಗೆ 26 ಅರ್ಜಿಗಳು ಬಂದಿದ್ದವು. ಅರ್ಜಿಗಳನ್ನು ಹೊರತುಪಡಿಸಿ ವಿಶೇಷ ಸೇವೆ ನೀಡಿರುವ ಸುಧೀರ್ ಕುಮಾರ್ ಶೆಟ್ಟಿಯವರ ಹೆಸರನ್ನು ಪರಿಗಣಿಸಿ ಅವರು ಈ ಬಾರಿಯ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಪುರಸ್ಕಾರ ನೀಡುವುದು ಉತ್ತಮ ಕೆಲಸ. ಇದರಿಂದ ಪುರಸ್ಕಾರ ಪಡೆದವರಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈ.ಸುಧೀರ್ ಕುಮಾರ್ ಶೆಟ್ಟಿ ಅವರು, ಈ ಬಾರಿಯ 13ನೆ ವರ್ಷದ ಪ್ರಶಸ್ತಿಯನ್ನು ಪಡೆಯುವ ಮೂಲಕ ಹಿಂದೆ ಪಿಂಗಾರ ಪ್ರಶಸ್ತಿ ಪಡೆದವರು ಸಾಲಿಗೆ ನಾನು ಸೇರಿದಂತಾಗಿದೆ ಎಂದರು. ‘ಪಿಂಗಾರ’ ಕನ್ನಡ ಸುದ್ದಿ ಪತ್ರಿಕೆಯ ಸಂಪಾದಕ ರೇಮಂಡ್ ಡಿಕುನಾ ಸ್ವಾಗತಿಸಿದರು.