ಧರ್ಮವನ್ನು ಖಚಿತಪಡಿಸಿಕೊಳ್ಳಲು ಯುವಕನನ್ನು ಬೆತ್ತಲೆಗೊಳಿಸಿದರು!

Update: 2017-11-07 15:32 GMT

ರೇವಾರಿ,ನ.7: ಯುವಕನೋರ್ವನ ಧರ್ಮವನ್ನು ಖಚಿತಪಡಿಸಿಕೊಳ್ಳಲು ಗುಂಪೊಂದು ಆತನನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ ಹೇಯ ಘಟನೆ ಇಲ್ಲಿ ನಡೆದಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
 ಪ್ರಕರಣವು ರೇವಾರಿ ಜಿಲ್ಲೆಯ ಗ್ರಾಮವೊಂದರಲ್ಲಿ ಅಂತರ್ಜಾತೀಯ ಪ್ರೇಮವಿವಾಹವಾಗಿದ್ದ ಜೋಡಿಗೆ ಸಂಬಂಧಿಸಿದೆ. ಯುವತಿ ಪರಿಶಿಷ್ಟ ಜಾತಿಗೆ ಸೇರಿದ್ದರೆ, ಯುವಕ ಯಾದವ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಅ.10ರಂದು ಈ ದಂಪತಿ ಔಷಧಿ ಖರೀದಿಗಾಗಿ ರೇವಾರಿಗೆ ಬಂದಿದ್ದು, 10-11 ಪುರುಷರು ಮತ್ತು 5-6 ಮಹಿಳೆಯರಿದ್ದ ಗುಂಪು ಬಸ್‌ನಿಲ್ದಾಣದ ಬಳಿ ಅವರಿಗೆ ಕಿರುಕುಳ ನೀಡಿತ್ತು.

ಗುಂಪು ತಮ್ಮ ಗುರುತುಚೀಟಿಗಳನ್ನು ತೋರಿಸುವಂತೆ ಕೇಳಿತ್ತು ಮತ್ತು ದಾರಿಹೋಕರೆದುರೇ ತನ್ನ ಪತಿಯನ್ನು ವಿವಸ್ತ್ರಗೊಳಿಸಿತ್ತು. ತಮ್ಮ ರಕ್ಷಣೆಗೆ ಯಾರೂ ಮುಂದಾಗಿರಲಿಲ್ಲ. ತಾನು ಧಾರ್ಮಿಕ ಸಂಘಟನೆಯೊಂದಕ್ಕೆ ಸೇರಿದ್ದಾಗಿ ಗುಂಪು ಹೇಳಿಕೊಂಡಿತ್ತು ಎಂದು ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ.

ರೇವಾರಿ ಬಸ್ ನಿಲ್ದಾಣದ ಪೊಲೀಸ್ ಚೌಕಿಯ ಎಎಸ್‌ಐ ಗಿರಿರಾಜ್ ಅವರನ್ನು ಅಮಾನತುಗೊಳಿಸುವುದಾಗಿ ರೇವಾರಿ ಎಸ್‌ಪಿ ಸಂಗೀತಾ ಕಾಲಿಯಾ ತಿಳಿಸಿದರು. ಅದು ಬರೀ ಜಗಳ, ದೊಡ್ಡ ವಿಷಯವಲ್ಲ ಎಂದು ಎಎಸ್‌ಐ ಭಾವಿಸಿದ್ದರು ಮತ್ತು ಇಡೀ ವಿಷಯ ಅವರ ಗಮನಕ್ಕೆ ಬಂದಿರದಿರುವ ಸಾಧ್ಯತೆಯಿದೆ ಎಂದೂ ಅವರು ಹೇಳಿದರು.

ಆರೋಪಿಗಳ ಪೈಕಿ ಓರ್ವ ಸ್ಥಳೀಯ ಮಹಿಳೆಯನ್ನು ಗುರುತಿಸಲಾಗಿದ್ದು, ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News