×
Ad

ಭಯೋತ್ಪಾದಕರಿಗೆ ಆರ್ಥಿಕ ನೆರವು ಆರೋಪ: ಎನ್‌ಐಎಯಿಂದ 9 ಮಂದಿಯ ಬಂಧನ

Update: 2017-11-07 21:27 IST

ಹೊಸದಿಲ್ಲಿ, ನ.7: ಜಮ್ಮು ಹಾಗು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಹಾಗು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದಲ್ಲಿ 9 ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಬಂಧಿಸಿದ್ದು, ಬಂಧಿತರಿಂದ 36 ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ದಿಲ್ಲಿ ನಿವಾಸಿಗಳಾದ ಪ್ರದೀಪ್ ಚೌಹಾಣ್, ಭಗವಾನ್ ಸಿಂಗ್ ಹಾಗು ವಿನೋದ್ ಶ್ರೀಧರ್ ಶೆಟ್ಟಿ, ಮುಂಬೈಯ ದೀಪಕ್ ತೊಪ್ರಾನಿ, ಅಮ್ರೋಹಾದ ಇಜಾಝುಲ್ ಹಸನ್, ನಾಗಪುರದ ಜಸ್ವೀಂದರ್ ಸಿಂಗ್, ಜಮ್ಮು ಕಾಶ್ಮೀರದ ಉಮರ್ ಮುಷ್ತಾಕ್ ದಾರ್, ಶಹನವಾಝ್ ಮಿರ್ ಹಾಗು ಮಜೀದ್ ಯೂಸುಫ್ ಸೋಫಿ ಎಂದು  ಗುರುತಿಸಲಾಗಿದೆ.

ಏಳು ಮಂದಿ ಆರೋಪಿಗಳು ಬಿಎಂಡಬ್ಲೂ ಎಕ್ಸ್3, ಹ್ಯುಂಟೈ ಕ್ರೆಟಾ ಎಸ್‌ಎಕ್ಸ್, ಫೋರ್ಡ್ ಇಕೊ ಸ್ಪೋರ್ಟ್ ಮತ್ತು ಬಿಎಂಡಬ್ಲೂ ಎಕ್ಸ್1 ವಾಹನಗಳಲ್ಲಿ ರೂ. 500 ಮತ್ತು ರೂ. 1000ದ ನಿಷೇಧಿತ ನೋಟುಗಳನ್ನು ಸಾಗಿಸುತ್ತಿದ್ದ ವೇಳೆ ಕನೌಟ್‌ಪ್ಲೇಸ್‌ಲ್ಲಿ ಅವರನ್ನು ತಡೆದ ಎನ್‌ಐಎ ಅಧಿಕಾರಿಗಳು ನೋಟುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಲು ಅವರನ್ನು ಎನ್ ಐಎ ಪ್ರಧಾನ ಕಚೇರಿಗೆ ಕರೆತರಲಾಯಿತು. ಬಂಧಿತರಿಂದ 36.34 ಕೋಟಿ ರೂ. ಮುಖಬೆಲೆಯ ಬ್ಯಾನ್ ಆದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಐಎ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಸೋಮವಾರ ಈ ಕಾರ್ಯಾಚರಣೆ ನಡೆದಿದ್ದು, ಸಂಜೆಯ ಸುಮಾರಿಗೆ ಇನ್ನೂ ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆರಂಭಿಕ ವಿಚಾರಣೆಯ ನಂತರ ಒಂಬತ್ತು ಮಂದಿಯನ್ನು ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಬಂಧಿಸಲಾಗಿದ್ದು ಅವರನ್ನು ಬುಧವಾರದಂದು ಎನ್‌ಐಎಯ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನೆಗೆ ಹಣಕಾಸು ನೆರವಿನ ಬಗ್ಗೆ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿಗಳ ಚಟುವಟಿಕೆಗಳ ಬಗ್ಗೆ ಎನ್‌ಐಗೆ ಪುರಾವೆ ಲಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕವಾದಿಗಳು ಮತ್ತು ಉಗ್ರರ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬಳಿ ಈಗಲೂ ಬದಲಾವಣೆ ಮಾಡಲಾಗದ ನಿಷೇಧಿತ ನೋಟುಗಳ ಬೃಹತ್ ಪ್ರಮಾಣದ ಸಂಗ್ರಹಣೆಯಿದೆ ಎಂಬುದು ತನಿಖೆಯ ವೇಳೆ ತಿಳಿದುಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News