ಬಿಜೆಪಿ ಪರಿವರ್ತನಾ ಯಾತ್ರೆ 12ಕ್ಕೆ ಉಡುಪಿಗೆ
ಉಡುಪಿ, ನ.7: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆರಂಭಗೊಂಡ ಬಿಜೆಪಿಯ ಪರಿವರ್ತನಾ ಯಾತ್ರೆ ನ.12ರಂದು ಬೆಳಗ್ಗೆ 10:45ಕ್ಕೆ ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಜಮಾಡಿಯನ್ನು ಪ್ರವೇಶಿಸಲಿದ್ದು, ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅದು ಸಂಚರಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಕಡಿಯಾಳಿಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಜಮಾಡಿಯಲ್ಲಿ ಯಾತ್ರೆಯನ್ನು ಸಾಂಪ್ರದಾಯಿಕ ವಾಗಿ ಸ್ವಾಗತಿಸಲಾಗುವುದು. ಬಳಿಕ 11 ಗಂಟೆಗೆ ಕಾಪು ಬಸ್‌ನಿಲ್ದಾಣದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಬಳಿಕ ಯಾತ್ರೆ ಕಾರ್ಕಳ ಕ್ಷೇತ್ರಕ್ಕೆ ತರಳಿ ಅಪರಾಹ್ನ 3:00ಗಂಟೆಗೆ ಹೆಬ್ರಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸಭೆ ನಡೆಸಲಿದೆ ಎಂದರು.
ಅಲ್ಲಿಂದ ಉಡುಪಿಗೆ ಆಗಮಿಸುವ ಯಾತ್ರಾ ತಂಡ, ಸಂಜೆ ಆರು ಗಂಟೆಗೆ ನಗರದ ಚಿತ್ತರಂಜನ್ ಸರ್ಕಲ್‌ನಲ್ಲಿ ಬಹಿರಂಗ ಸಭೆಯನ್ನು ನಡೆಸಲಿದೆ. ಸಂಜೆ ಉಡುಪಿಯಲ್ಲಿ ತಂಗುವ ಯಾತ್ರೆ, ಮರುದಿನ ಕುಂದಾಪುರ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಲಿದ್ದು, ಅಲ್ಲಿನ ನೆಹರು ಮೈದಾನದಲ್ಲಿ 11:00ಗಂಟೆಗೆ, ಆ ಬಳಿಕ ಬೈಂದೂರು ಕ್ಷೇತ್ರದ ಕಿರುಮಂಜೇಶ್ವರದಲ್ಲಿ ಆಪರಾಹ್ನ 3:00ಕ್ಕೆ ಬಹಿರಂಗ ಸಭೆಯನ್ನು ನಡೆಸಿದ ಬಳಿಕ ಉತ್ತರ ಕನ್ನಡದ ಭಟ್ಕಳಕ್ಕೆ ತೆರಳಲಿದೆ ಎಂದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿಸುವ ನಿಟ್ಟಿನಲ್ಲಿ ನಡೆದಿರುವ ಪರಿವರ್ತನಾ ಯಾತ್ರೆಯ ವೇಳೆ ಜಿಲ್ಲೆಯ ಪ್ರತಿಸಭೆಯಲ್ಲಿ 15ರಿಂದ 20 ಸಾವಿರಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದರು.
ಉಡುಪಿ ಜಿಲ್ಲೆಯ ಸಭೆಯಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಅಥವಾ ನಿರ್ಮಲಾ ಸೀತಾರಾಮ್ ಅವರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಈಗ ಸ್ಮತಿ ಇರಾನಿ ಅಥವಾ ನಿತಿನ್ ಗಡ್ಕರಿ ಅವರು ಆಗಮಿಸುವ ಸಾಧ್ಯತೆ ಇದೆ ಎಂದು ಮಟ್ಟಾರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೋಟ ಶ್ರೀನಿವಾಸ ಪೂಜಾರಿ, ಕೆ.ರಘುಪತಿ ಭಟ್, ದಿನಕರ ಬಾಬು, ಕಟಪಾಡಿ ಶಂಕರ ಪೂಜಾರಿ, ಯಶ್ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು.