ಕಾಬೂಲ್ ನಲ್ಲಿ ಟಿವಿ ನಿಲಯದ ಮೇಲೆ ದಾಳಿ: 2 ಸಾವು; 20 ಮಂದಿಗೆ ಗಾಯ

Update: 2017-11-07 16:51 GMT

ಕಾಬೂಲ್, ನ. 7: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಟೆಲಿವಿಶನ್ ನಿಲಯವೊಂದರ ಮೇಲೆ ಮಂಗಳವಾರ ಭಯೋತ್ಪಾದಕರು ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ.

ಪೊಲೀಸರ ವೇಷದಲ್ಲಿದ್ದ ಭಯೋತ್ಪಾದಕರು ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದರು ಹಾಗೂ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು.

ತಕ್ಷಣ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಟಿವಿ ನಿಲಯವನ್ನು ತಮ್ಮ ವಶಕ್ಕೆ ತೆಗೆದುಕೊಂಡವು ಹಾಗೂ ಕಾರ್ಯಕ್ರಮ ಪ್ರಸಾರ ಪುನಾರಂಭಗೊಂಡಿತು.

‘‘ಆಕ್ರಮಣ ಕೊನೆಗೊಂಡಿದೆ. ಕಟ್ಟಡದೊಳಗಿದ್ದ ಎಲ್ಲ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂಬುದಾಗಿ ವಿಶೇಷ ಪಡೆಗಳ ಕಮಾಂಡರ್ ಹೇಳಿದ್ದಾರೆ’’ ಎಂದು ದಾಳಿ ಕೊನೆಗೊಂಡ ಸ್ವಲ್ಪ ಹೊತ್ತಿನ ಬಳಿಕ ಶಂಶದ್ ಟಿವಿ ಘೋಷಿಸಿದೆ.

ಶಂಶದ್ ಟಿವಿಯನ್ನು ಸುತ್ತುವರಿದ ಸಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗ್ರೆನೇಡ್‌ಗಳನ್ನು ಹಾರಿಸಿದರು ಹಾಗೂ ಕೆಲವು ಸಿಬ್ಬಂದಿ ಕಟ್ಟಡದ ಒಳಗೆ ಸಿಕ್ಕಿಹಾಕಿಕೊಂಡರು ಎಂದು ಎಎಫ್‌ಪಿ ವರದಿ ಮಾಡಿದೆ.

ದಾಳಿ ನಡೆಯುತ್ತಿದ್ದಂತೆಯೇ ಪಶ್ಟೊ ಭಾಷೆಯ ಟಿವಿಯು ತನ್ನ ನಿಗದಿತ ಕಾರ್ಯಕ್ರಮ ಪ್ರಸಾರವನ್ನು ನಿಲ್ಲಿಸಿತು ಹಾಗೂ ಕೇವಲ ಚಿತ್ರಗಳನ್ನು ಪ್ರಸಾರ ಮಾಡಲು ಆರಂಭಿಸಿತು.

ಸುಮಾರು ಎರಡರಿಂದ ಐದು ಮಂದಿ ಸಿಬ್ಬಂದಿ ಹತರಾಗಿರುವಂತೆ ಕಂಡುಬರುತ್ತಿದೆ ಹಾಗೂ ಕಟ್ಟಡದ ಒಳಗಡೆ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಶಂಶದ್ ಟಿವಿಯ ಟ್ವಿಟರ್ ಖಾತೆಯಿಂದ ಮಾಡಲಾದ ಟ್ವೀಟೊಂದು ಹೇಳಿದೆ.

ಕನಿಷ್ಠ 20 ಸಿಬ್ಬಂದಿ ಮತ್ತು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.

ಟಿವಿ ನಿಲಯದ ಒಳಗೆ ನುಗ್ಗಲು ಭದ್ರತಾ ಪಡೆಗಳು ಆವರಣ ಗೋಡೆಯೊಂದನ್ನು ಸ್ಫೋಟಿಸಿದವು.

ಮೊದಲು ದಾಳಿ ಮಾಡಿದ್ದು ಓರ್ವ ಆತ್ಮಹತ್ಯಾ ಬಾಂಬರ್ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದರು. ಮೂವರು ಆಕ್ರಮಣಕಾರರಿದ್ದು, ಓರ್ವನನ್ನು ಕೊಲ್ಲಲಾಗಿದೆ ಎಂದರು.

ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ ಹಾಗೂ ತಾನು ದಾಳಿ ನಡೆಸಿಲ್ಲ ಎಂದು ತಾಲಿಬಾನ್ ಹೇಳಿಕೆ ನೀಡಿದೆ.

ಅಫ್ಘಾನ್‌ಗೆ ಇನ್ನೂ 3,000 ಸೈನಿಕರು: ನ್ಯಾಟೊ

ಅಫ್ಘಾನಿಸ್ತಾನದಲ್ಲಿ ಅಲ್ಲಿನ ಸೈನಿಕರಿಗೆ ತರಬೇತಿ ನೀಡುವುದಕ್ಕಾಗಿ ಅಲ್ಲಿಗೆ ಇನ್ನೂ 3,000 ಸೈನಿಕರನ್ನು ಕಳುಹಿಸುವುದಾಗಿ ನ್ಯಾಟೊ ಮಂಗಳವಾರ ಹೇಳಿದೆ.

‘‘ಭಯೋತ್ಪಾದಕರನ್ನು ನಿಭಾಯಿಸುವಲ್ಲಿ ಅಫ್ಘಾನಿಸ್ತಾನೀಯರಿಗೆ ಸಹಾಯ ಮಾಡುವುದಕ್ಕಾಗಿ ನಮ್ಮ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ’’ ಎಂದು ಎರಡು ದಿನಗಳ ಉತ್ತರ ಅಟ್ಲಾಂಟಿಕ್ ಕೌನ್ಸಿಲ್ ಸಭೆಯ ಮುನ್ನಾ ದಿನ ಬ್ರಸೆಲ್ಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆನ್ಸ್ ಸ್ಟಾಲ್ಟನ್‌ಬರ್ಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News