‘ಹೆಡ್ ಮಾಸ್ಟರ್’ ರಹಸ್ಯ ಬಿಚ್ಚಿಟ್ಟ ಕುಂಬ್ಳೆ

Update: 2017-11-07 18:37 GMT

ಹೊಸದಿಲ್ಲಿ, ನ.7: ಜೂನ್‌ನಲ್ಲಿ ವಿವಾದಾತ್ಮಕ ಸನ್ನಿವೇಶದಲ್ಲಿ ಭಾರತದ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ್ದ ಕ್ರಿಕೆಟ್ ಲೆಜೆಂಡ್ ಅನಿಲ್ ಕುಂಬ್ಳೆ ಆಟಗಾರರೊಂದಿಗೆ ಅತ್ಯಂತ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದರು. ಕುಂಬ್ಳೆ ‘ಹೆಡ್‌ಮಾಸ್ಟರ್’ರಂತೆ ವರ್ತಿಸುತ್ತಾರೆ ಎಂದು ಕೆಲವು ಆಟಗಾರರು ದೂರಿದ್ದರು.

 ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರೊಂದಿಗೆ ಮಾತುಕತೆಯ ವೇಳೆ ತನ್ನ ಹೆಸರಿನೊಂದಿಗೆ ಹೆಡ್‌ಮಾಸ್ಟರ್ ಶಬ್ದ ಸೇರ್ಪಡೆಯಾಗಿರುವ ಬಗ್ಗೆ ಬಾಲ್ಯದಿಂದ ಚಾಂಪಿಯನ್ ಕ್ರಿಕೆಟಿಗನಾಗಿ ರೂಪುಗೊಂಡ ಬಗ್ಗೆ ದೀರ್ಘ ವಿವರಣೆ ನೀಡಿದರು. ಕುಂಬ್ಳೆ ವಿವರಣೆಯನ್ನು ಹೈದರಾಬಾದ್ ಮೂಲದ ಸತ್ಯ ತಾಳ್ಮೆಯಿಂದ ಆಲಿಸಿದರು.

ನಿಮ್ಮ ಹೆತ್ತವರಿಂದ ನಿಮಗೆ ಬಂದ ವೌಲ್ಯಗಳೇನು? ಎಂದು ಸತ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕುಂಬ್ಳೆ, ‘‘ಸ್ವನಂಬಿಕೆ ನನ್ನ ಹೆತ್ತವರು ಹಾಗೂ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ’’ ಎಂದರು.

  ‘‘ನನ್ನ ಅಜ್ಜ ಶಾಲೆಯಲ್ಲಿ ಹೆಡ್‌ಮಾಸ್ಟರ್ ಆಗಿದ್ದರು. ಹೆಡ್‌ಮಾಸ್ಟರ್ ಎಂಬ ಪದ ವೃತ್ತಿಜೀವನದ ಕೊನೆಯಲ್ಲಿ ನನ್ನ ಹೆಸರಿಗೆ ತಳುಕು ಹಾಕಿಕೊಂಡಿತ್ತು’’ ಎಂದು ಹೇಳಿದರು. ಭಾರತದ ಪರ ಗರಿಷ್ಠ ವಿಕೆಟ್‌ಗಳನ್ನು ಕಬಳಿಸಿರುವ ಕುಂಬ್ಳೆ ಅವರು ನಾಯಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸದೇ ವೌನ ಕಾಯ್ದುಕೊಂಡರು.

‘‘2003-04ರಲ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಡ್ರಾ ಗೊಳಿಸಿದ್ದಾಗ ತಾನು ಭಾರೀ ಸವಾಲು ಎದುರಿಸಿದ್ದೆ. ಆ ಸಂದರ್ಭದಲ್ಲಿ ಹರ್ಭಜನ್ ಸಿಂಗ್‌ರಿಂದ ಸ್ಪರ್ಧೆ ಎದುರಿಸಬೇಕಾಯಿತು. ಜನರು ನನ್ನ ನಿವೃತ್ತಿಯ ಬಗ್ಗೆ ಮಾತನಾಡಲಾರಂಭಿಸಿದ್ದರು. ಅಡಿಲೇಡ್ ಟೆಸ್ಟ್‌ನ ಮೊದಲ ದಿನ ದುಬಾರಿ ಬೌಲರ್ ಎನಿಸಿಕೊಂಡಿದ್ದರೂ 5 ವಿಕೆಟ್ ಗೊಂಚಲು ಪಡೆದಿದ್ದೆ’’ ಎಂದು ತನ್ನ ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲಿನ ಬಗ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News