×
Ad

‘ನಿರಾಳ’ ಎಂದು ಮಾಡಿರುವ ನೋಟು ರದ್ದತಿ ‘ಕರಾಳ’ವಾಗಿದೆ-ಶಕುಂತಳಾ ಶೆಟ್ಟಿ

Update: 2017-11-08 19:55 IST

ಪುತ್ತೂರು, ನ. 8: ನಿರಾಳ ಎಂದೆನ್ನಲಾಗಿದ್ದ ನೋಟು ರದ್ದತಿಯು ಜನತೆಗೆ ಕರಾಳವಾಗಿ ಪರಿಣಮಿಸಿದೆ. ನೋಟು ಅಮಾನ್ಯದಿಂದ ಜನತೆ ಅನುಭವಿಸಿದ ಕಷ್ಟ ನಷ್ಟಗಳು ಅಚ್ಚೇದಿನ್ ಎನ್ನುವ ಮಂದಿಗೆ ಇನ್ನೂ ಅರ್ಥವಾಗಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಬುಧವಾರ ಇಲ್ಲಿನ ಬಸ್ಸು ನಿಲ್ದಾಣದ ಬಳಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ‘ಕರಾಳ ದಿನಾಚರಣೆ’ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಪ್ರದಾನಿ ಮೋದಿ ಒಳ್ಳೆಯವರು, ಅವರ ಬಗ್ಗೆ ತನಗೆ ತುಂಬಾ ಗೌರವವಿದೆ. ಆದರೆ ಅವರೊಂದಿಗೆ ಇರುವ ಬಿಜೆಪಿಗರು ಅವರನ್ನು ಸುಳ್ಳು ಹೇಳುತ್ತಾ ದಾರಿ ತಪ್ಪಿಸುತ್ತಿದ್ದಾರೆ. ಅದರ ಪರಿಣಾಮದಿಂದ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಗೆ ತಂದಿದ್ದಾರೆ ಎಂದ ಅವರು ಇನ್ನಾದರೂ ಮೋದಿ ಅವರು ಇಂತಹ ಯೋಚನೆಯನ್ನು ಜಾರಿಗೆ ತರುವಾಗ ಆರ್ಥಿಕ ತಜ್ಞರ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರದ ಅನ್ನಭಾಗ್ಯ, ಪಶುಭಾಗ್ಯ, ಅಡಿಕೆ ಬೆಂಬಲ ಬೆಲೆ ಎಲ್ಲವನ್ನೂ ಕದ್ದು ಮುಚ್ಚಿ ಪಡೆದುಕೊಂಡಿರುವ ಬಿಜೆಪಿಗರು ಇದೀಗ ಸಿದ್ದರಾಮಯ್ಯ ಅವರನ್ನು ದೂರುತ್ತಿದ್ದಾರೆ. ಅನ್ನ ಭಾಗ್ಯ ಕೇಂದ್ರ ಸರ್ಕಾರದ ಯೋಜನೆ ಎಂದು ಸುಳ್ಳು ಹೇಳಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಗೋಮಾರಾಟ ಮಾಡುವವರೇ ಗೋರಕ್ಷಕರೆಂದು ಹೇಳುತ್ತಿದ್ದಾರೆ. ಅವರಿಗೆ ಗೋವಿನ ಬಗ್ಗೆ ನೈಜ ಕಾಳಜಿಯಿದ್ದಲ್ಲಿ ಕರುಹಾಕದ ದನಗಳ ಹಾಗೂ ಹೋರಿ ಕರುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಲಿ ಎಂದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಬಸ್ಸು ನಿಲ್ದಾಣದ ತನಕ ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ನಡೆಸಿದರು. ನೋಟು ರದ್ದತಿ ಸಂದರ್ಭದಲ್ಲಿ ಮೃತಪಟ್ಟ ದೇಶದ 150 ಮಂದಿಗೆ ಶಾಸಕಿ ಅವರು ಮೋಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪಕ್ಷದ ಮುಖಂಡರಾದ ಮಹೇಶ್ ರೈ ಅಂಕೊತ್ತಿಮಾರು, ನೂರುದ್ದೀನ್ ಸಾಲ್ಮರ, ಶ್ರೀರಾಮ ಪಕ್ಕಳ, ಹರೀಣಾಕ್ಷಿ ಜೆ.ಶೆಟ್ಟಿ, ದುರ್ಗಾಪ್ರಸಾದ್ ರೈ ಕುಂಬ್ರ, ಯಾಕೂಬ್ ದರ್ಬೆ, ಮೊಯ್ದೀನ್ ಅರ್ಶದ್ ದರ್ಬೆ, ಅಬ್ದುಲ್ ರಹಿಮಾನ್ ಅಝಾದ್, ಯು.ಟಿ. ತೌಸೀಫ್, ವಿಕ್ರಂ ರೈ ಸಾಂತ್ಯ, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ, ಜೋಕಿಂ ಡಿ’ಸೋಜ, ವಿಶಾಲಾಕ್ಷಿ, ಇಸಾಕ್ ಸಾಲ್ಮರ, ನಿರಂಜನ ರೈ ಮಠಂತಬೆಟ್ಟು, ಅಮಳ ರಾಮಚಂದ್ರ, ಇಬ್ರಾಹಿಂ ಬಾತಿಷ್, ರೇಖಾ ಯಶೋಧರ್, ಮನಮೋಹನ್, ಸಾಹಿರ ಝುಬೈರ್, ಶಾರದಾ ಅರಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News