×
Ad

ಶೀಘ್ರ ಮೊಬೈಲ್ ಕ್ಯಾಂಟೀನ್ ಆರಂಭ: ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತೀ ಶಂಕರ್

Update: 2017-11-08 20:00 IST

ಮಂಗಳೂರು, ನ.8:ರಾಜ್ಯದ ಪ್ರತೀ ಜಿಲ್ಲೆಗೊಂದರಂತೆ ಸರಕಾರಿ ಅಧೀನದಲ್ಲಿರುವ ಜಿಲ್ಲಾ ಮಹಿಳಾ ಒಕ್ಕೂಟದ ಮೂಲಕ ಸವಿರುಚಿ ಕೈತುತ್ತು ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗುವುದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತೀ ಶಂಕರ್ ಹೇಳಿದರು

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ಒಕ್ಕೂಟದಲ್ಲಿ 11 ಅಥವಾ 12 ಮಂದಿ ಇದ್ದಾರೆ. ಒಂದೊಂದು ಒಕ್ಕೂಟಕ್ಕೆ ಮೊಬೈಲ್ ಕ್ಯಾಂಟೀನ್ ಆರಂಭಿಸಲು ತಲಾ 10 ಲಕ್ಷ ರೂ. ನೀಡಲಾಗುವುದು. ಇದರಲ್ಲಿ ಒಕ್ಕೂಟದ ಎಲ್ಲ ಸದಸ್ಯೆಯರೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಈ ಹಣದಲ್ಲಿ ವಾಹನ, ಪಾತ್ರೆ ಪಗಡೆ ಹಾಗೂ ಆಹಾರ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದೆ. ಈ ಹಣಕ್ಕೆ ಬಡ್ಡಿ ಇಲ್ಲ. ಆದರೆ, 53 ತಿಂಗಳಲ್ಲಿ ಈ ಹಣವನ್ನು ಮರುಪಾವತಿಸುವ ಹೊಣೆ ಒಕ್ಕೂಟದ್ದಾಗಿದೆ ಎಂದರು.

ಆಯಾ ಜಿಲ್ಲೆಯ ಜನರ ಆಹಾರದ ಮೆನುವನ್ನು ಆಧಾರಿಸಿ ತಿಂಡಿ ತಿನಿಸು ತಯಾರಿಸಬಹುದಾಗಿದೆ. ಇದರ ಜೊತೆ ಗುಡಿಕೈಗಾರಿಕೆಗಳ ಸಾಮಗ್ರಿಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುವುದು. ಒಕ್ಕೂಟದ ಸದಸ್ಯರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಇದರಲ್ಲಿ ವಾಹನ ಚಾಲನೆಗೆ ಉತ್ತೇಜನವನ್ನೂ ನೀಡಲಾಗುತ್ತದೆ ಎಂದ ಭಾರತೀ ಶಂಕರ್, ನ.19ರಂದು ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಈ ಮಹತ್ವದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳ ಸಮ್ಮುಖ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News