ಡಿ. 18ರಂದು ಕೋರ್ಟ್‌ಗೆ ಹಾಜರಾಗದೇ ಇದ್ದರೆ ವಿಜಯ ಮಲ್ಯ ‘ಘೋಷಿತ ಅಪರಾಧಿ’
Update: 2017-11-08 20:17 IST
ಹೊಸದಿಲ್ಲಿ, ನ. 8: ಡಿಸೆಂಬರ್ 18ರಂದು ತನ್ನ ಮುಂದೆ ಹಾಜರಾಗುವಂತೆ ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಬುಧವಾರ ಉದ್ಯಮಿ ವಿಜಯ ಮಲ್ಯ ಅವರಿಗೆ ನಿರ್ದೇಶಿಸಿದೆ. ಮಲ್ಯ ಅಂದು ಹಾಜರಾಗದೆ ಇದ್ದರೆ, ಘೋಷಿತ ಅಪರಾಧಿ ಎಂದು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ವಿಷಯಕ್ಕೆ ಸಂಬಂಧಿಸಿದ ಸಮನ್ಸ್‌ನಿಂದ ತಪ್ಪಿಸಿಕೊಂಡ ಪ್ರಕರಣದಲ್ಲಿ ವಿಜಯ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಪ್ರಕಟಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಸಂಪರ್ಕಿಸಿತ್ತು.
ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಕೆ. ಮೆಹ್ತಾ ಅವರು, ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಪ್ರಕಟಿಸಲು ಕೋರುವ ಬದಲು ಇಡಿಗೆ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಹೇಳಿದರು.ನ್ಯಾಯಾಲಯ ಎಪ್ರಿಲ್ 12ರಂದು ವಿಜಯ ಮಲ್ಯರಿಗೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು.