ಸಿಂಧುವನ್ನು ಮಣಿಸಿದ ಸೈನಾ ಮುಡಿಗೆ ಸಿಂಗಲ್ಸ್ ಕಿರೀಟ
ನಾಗ್ಪುರ, ನ.8: ಸೀನಿಯರ್ ಬ್ಯಾಡ್ಮಿಂಟನ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಸಹ ಆಟಗಾರ್ತಿ, ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧುರನ್ನು ಮಣಿಸಿದ ಸೈನಾ ನೆಹ್ವಾಲ್ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.11ನೆ ಆಟಗಾರ್ತಿ ಸೈನಾ ಅವರು ಸಿಂಧು ಅವರನ್ನು 21-17, 27-25 ನೇರ ಗೇಮ್‌ಗಳ ಅಂತರದಿಂದ ಸೋಲಿಸಿದರು. ಈ ಮೂಲಕ ಮೂರನೆ ಬಾರಿ ನ್ಯಾಶನಲ್ ಟ್ರೋಫಿ ಗೆದ್ದುಕೊಂಡರು. ಸೈನಾ ಈ ಹಿಂದೆ 2006 ಹಾಗೂ 2007ರಲ್ಲಿ ಸತತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಭಾರತದ ಬ್ಯಾಡ್ಮಿಂಟನ್ ಕ್ವೀನ್ಸ್‌ಗಳಾದ ಸೈನಾ ಹಾಗೂ ಸಿಂಧು ಇಂದಿನ ಪಂದ್ಯ ಸೇರಿದಂತೆ ಒಟ್ಟು 3 ಬಾರಿ ಮುಖಾಮುಖಿಯಾಗಿದ್ದು ಸೈನಾ ಹೆಡ್-ಟು-ಹೆಡ್ ದಾಖಲೆಯಲ್ಲಿ 2-1 ಮುನ್ನಡೆ ಸಾಧಿಸಿದ್ದಾರೆ.
ಈ ಇಬ್ಬರು ಆಟಗಾರ್ತಿಯರು 2014ರಲ್ಲಿ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಿ ಹಾಗೂ ಈ ವರ್ಷ ಇಂಡಿಯಾ ಓಪನ್ ಸೂಪರ್ ಸರಣಿಯಲ್ಲಿ ಮುಖಾಮುಖಿಯಾಗಿದ್ದರು. 2014ರಲ್ಲಿ ಸೈನಾ ಹಾಗೂ ಈ ವರ್ಷ ಸಿಂಧು ಪಂದ್ಯವನ್ನು ಜಯಿಸಿದ್ದರು.