ಹೊಸದಿಲ್ಲಿ: ರವಿವಾರದವರೆಗೆ ಶಾಲೆಗಳಿಗೆ ರಜೆ

Update: 2017-11-08 15:14 GMT

ಹೊಸದಿಲ್ಲಿ, ನ. 8: ಹೊಸದಿಲ್ಲಿಯಲ್ಲಿ ವಾಯು ಗುಣಮಟ್ಟ ಕುಸಿದಿರುವುದರಿಂದ ಶಿಕ್ಷಣ ಸಚಿವ ಮನೀಶ್ ಸಿಸೋಡಿಯ ರವಿವಾರದ ವರೆಗೆ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ಹೊಸದಿಲ್ಲಿ ಹಾಗೂ ಅದರ ಸಮೀಪದ ಉಪ ನಗರಗಳಲ್ಲಿ ಬುಧವಾರ ಬೆಳಗ್ಗೆ ಬೂದು ಬಣ್ಣದ ಮಬ್ಬು ಆವರಿಸಿತ್ತು. ಕೆಲವು ಸ್ಥಳಗಳಲ್ಲಿ 300 ಮೀಟರ್‌ಗಿಂತ ದೂರದಲ್ಲಿದ್ದುದು ದೃಷ್ಟಿಗೆ ಗೋಚರವಾಗುತ್ತಿರಲಿಲ್ಲ. ಇದರಿಂದ ರೈಲು ಹಾಗೂ ವಿಮಾನ ಹಾರಾಟದಲ್ಲಿ ವಿಳಂಬವಾಯಿತು.

ದಿಲ್ಲಿಗೆ ಆಗಮಿಸುತ್ತಿದ್ದ 30 ರೈಲುಗಳು, ದಿಲ್ಲಿಗೆ ಆಗಮಿಸುವ ಅಥವಾ ನಿರ್ಗಮಿಸುವ 30 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ, ಸಮೀಪದ ನೋಯ್ಡ (ಉತ್ತರಪ್ರದೇಶ) ಹಾಗೂ ಗುರ್ಗಾಂವ್ (ಹರ್ಯಾಣ)ನಲ್ಲಿ ವಾಯು ಗುಣಮಟ್ಟ ಬುಧವಾರ ದಿಗಿಲು ಹುಟ್ಟುವಷ್ಟು ಹದಗೆಟ್ಟಿತ್ತು. ದ್ವಾರ್ಕಾ, ಇಂಡಿಯಾ ಗೇಟ್ ಧೌಲಾ ಕುವಾನ್, ಆರ್.ಕೆ. ಪುರಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿತ್ತು.

ದಿಲ್ಲಿಯಲ್ಲಿ ವಾಯು ಗುಣಮಟ್ಟ ಕ್ಷೀಣಿಸಿದೆ. ಇದರಿಂದ ಮಕ್ಕಳ ಆರೋಗ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ದಿಲ್ಲಿಯಲ್ಲಿರುವ ಎಲ್ಲ ಶಾಲೆಗಳನ್ನು ರವಿವಾರದ ವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.

ಮನೀಶ್ ಸಿಸೋಡಿಯಾ, ಶಿಕ್ಷಣ ಸಚಿವ

ವಾಹನಗಳ ಸರಣಿ ಢಿಕ್ಕಿ

 ದಿಲ್ಲಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಆವರಿಸಿಕೊಂಡಿರುವ ದಟ್ಟ ಹೊಗೆಯ ಪರಿಣಾಮ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬುಧವಾರ ವಾಹನಗಳ ಸರಣಿ ಢಿಕ್ಕಿ ಸಂಭವಿಸಿದೆ. ಇದರಿಂದ ಕನಿಷ್ಠ 24 ವಾಹನಗಳು ಜಖಂಗೊಂಡಿವೆ, ಹಲವು ಚಾಲಕರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್ ಢಿಕ್ಕಿ: 9 ಮಂದಿ ವಿದ್ಯಾರ್ಥಿಗಳು ಮೃತ್ಯು

  ಚಂಡಿಗಡ: ಪಂಜಾಬ್‌ನ ಬಥಿಂಡಾ ಜಿಲ್ಲೆಯ ಬುಚೊ ಮಂಡಿ ಪಟ್ಟಣದಲ್ಲಿ ಟ್ರಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ಪ್ಲೈಓವರ್‌ನಲ್ಲಿ ನಿಂತಿದ್ದ 9 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹಿಮ ಆವರಿಸಿಕೊಂಡ ಕಾರಣ ವಿದ್ಯಾರ್ಥಿಗಳು ನಿಂತಿರುವುದು ಗೋಚರವಾಗದೇ ಇರುವುದು ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News