×
Ad

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ನಾಳೆ ಮತದಾನ

Update: 2017-11-08 20:47 IST

ಶಿಮ್ಲಾ,ನ.8: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮತದಾನ ಗುರುವಾರ ನಡೆಯಲಿದ್ದು, ಎಲ್ಲ 68 ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಪ್ರೇಮಕುಮಾರ ಧುಮಾಲ ನೇತೃತ್ವದ ಬಿಜೆಪಿ ಮತ್ತು ಮುಖ್ಯಮಂತ್ರಿ ವೀರಭದ್ರ ಸಿಂಗ್ ನೇತೃತ್ವದ ಕಾಂಗ್ರೆಸ್ ಮುಖಾಮುಖಿಯಾಗಿವೆ. 62 ಶಾಸಕರು ಸೇರಿದಂತೆ ಒಟ್ಟು 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

 ಸಿಂಗ್ ಮತ್ತು ಧುಮಾಲ್ ಜೊತೆಗೆ 10 ಸಚಿವರು, ಎಂಟು ಮುಖ್ಯ ಸಂಸದೀಯ ಕಾರ್ಯದರ್ಶಿಗಳು, ಡೆಪ್ಯೂಟಿ ಸ್ಪೀಕರ್ ಜಗತ್ ಸಿಂಗ್ ನೇಗಿ ಮತ್ತು ಡಝನ್ನಿಗೂ ಅಧಿಕ ಮಾಜಿ ಸಚಿವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಬಿಎಸ್‌ಪಿ 42, ಸಿಪಿಎಂ 14, ಸ್ವಾಭಿಮಾನ ಪಾರ್ಟಿ ಮತ್ತು ಲೋಕ ಘಟಬಂಧನ ಪಾರ್ಟಿ ತಲಾ ಆರು ಮತ್ತು ಸಿಪಿಐ ಮೂರು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

12 ದಿನಗಳ ಅಬ್ಬರದ ಚುನಾವಣಾ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನ ತಾರಾ ಪ್ರಚಾರಕರ 450ಕ್ಕೂ ಅಧಿಕ ರ್ಯಾಲಿಗಳಿಗೆ ರಾಜ್ಯವು ಸಾಕ್ಷಿಯಾಗಿತ್ತು. ಪ್ರಧಾನಿ ನರೇದ್ರ ಮೋದಿ ಅವರು ಏಳು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆರು ರ್ಯಾಲಿಗಳನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೂರು ರ್ಯಾಲಿಗಳಲ್ಲಿ ಮಾತನಾಡಿದ್ದಾರೆ.

ಬಿಜೆಪಿಯು ಭ್ರಷ್ಟಾಚಾರವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಮುಖ್ಯಮಂತ್ರಿ ವೀರಭದ್ರ ಸಿಂಗ್ ವಿರುದ್ಧ ದಾಳಿ ನಡೆಸಿದ್ದರೆ, ಕಾಂಗ್ರೆಸ್ ಜಿಎಸ್‌ಟಿ ಮತ್ತು ನೋಟು ಅಮಾನ್ಯ ಕ್ರಮಗಳನ್ನು ಬಿಜೆಪಿ ವಿರುದ್ಧ ತನ್ನ ಅಸ್ತ್ರಗಳನ್ನಾಗಿಸಿಕೊಂಡಿತ್ತು.

ಜಂಡುತಾ ಕ್ಷೇತ್ರದಲ್ಲಿ ಮಾತ್ರ ನೇರ ಸ್ಪರ್ಧೆ ಏರ್ಪಟ್ಟಿದ್ದು, ಧರ್ಮಶಾಲಾದಲ್ಲಿ ಗರಿಷ್ಠ ಸಂಖ್ಯೆಯ(12) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯು ಮಾಜಿ ಸಚಿವ ಅನಿಲ ಶರ್ಮಾ ಸೇರಿದಂತೆ ನಾಲ್ವರು ಕಾಂಗ್ರೆಸಿಗರನ್ನು ಕಣಕ್ಕಿಳಿಸಿದೆ. ಚೋಪಾಲ್‌ನಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿಗೆ ಅದು ಟಿಕೆಟ್ ನೀಡಿದೆ. ಕಾಂಗ್ರೆಸ್ ಪಾವೋಂಟಾ ಸಾಹಿಬ್ ಮತ್ತು ಕಾಂಗ್ಡಾಗಳಿಂದ ಇಬ್ಬರು ಪಕ್ಷೇತರರನ್ನು ಸ್ಪರ್ಧೆಗಿಳಿಸಿದೆ.

ಸಿಂಗ್ ಮತ್ತು ಧುಮಾಲ್ ತಮ್ಮ ಕ್ಷೇತ್ರಗಳನ್ನು ಬದಲಿಸಿದ್ದು, ಅನುಕ್ರಮವಾಗಿ ಅರ್ಕಿ ಮತ್ತು ಸುಜನಪುರ್‌ಗಳಿಂದ ಸ್ಪರ್ಧಿಸಿದ್ದಾರೆ.

 ಕರ್ಸೋಗ್(ಪ.ಜಾ)ನಿಂದ 1967ರಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದ ಮುಖ್ಯ ಸಂಸದೀಯ ಕಾರ್ಯದರ್ಶಿ ಮಾನ್ಸಾ ರಾಮ್ ಅವರು 11ನೇ ಬಾರಿಗೆ ಕಣದಲ್ಲಿದ್ದಾರೆ.

 ಬಿಜೆಪಿಯ ಆರು ಮತ್ತು ಕಾಂಗ್ರೆಸಿನ ಮೂವರು ಸೇರಿದಂತೆ ಒಟ್ಟು 19 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸಿನ ತಲಾ ಏಳು ಬಂಡುಕೋರರೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

68 ಸದಸ್ಯಬಲದ ವಿಧಾನಸಭೆಯಲ್ಲಿ ಹಾಲಿ ಕಾಂಗ್ರೆಸ್ 35 ಮತ್ತು ಬಿಜೆಪಿ 28 ಶಾಸಕರನ್ನು ಹೊಂದಿದ್ದರೆ ನಾಲ್ಕರಲ್ಲಿ ಪಕ್ಷೇತರರಿದ್ದಾರೆ. ಒಂದು ಸ್ಥಾನವು ತೆರವಾಗಿದೆ.

ಒಟ್ಟು 50,25,941 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ 7,525 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 31,605 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, 17,850 ಪೊಲೀಸರು ಮತ್ತು ಗೃಹರಕ್ಷಕ ರೊಂದಿಗೆ ಕೇಂದ್ರೀಯ ಅರೆ ಮಿಲಿಟರಿ ಪಡೆಗಳ 65 ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪುಷ್ಪೇಂದರ್ ರಾಜಪೂತ ತಿಳಿಸಿದರು.

ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗದಿಂದ ಮತದಾನ ಚಟುವಟಿಕೆಗಳ ನೇರ ನಿಗಾಕ್ಕಾಗಿ 2,307 ಮತಗಟ್ಟೆಗಳಲ್ಲಿ ವೆಬ್-ಕಾಸ್ಟಿಂಗ್ ಬಳಕೆಯಾಗಲಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇವಿಎಂಗಳೊಂದಿಗೆ ವಿವಿಪಿಎಟಿಗಳನ್ನು ಬಳಸಲಾಗುತ್ತಿದೆ.

ಲಹಾವುಲ್ ಮತ್ತು ಸ್ಪಿತಿ ವಿಧಾನಸಭಾ ಕ್ಷೇತ್ರದ ಹಿಕ್ಕಿಂ ಮತಗಟ್ಟೆಯು ಅತ್ಯಂತ ಎತ್ತರ(14,567 ಅಡಿ)ದಲ್ಲಿದ್ದು, 194 ಮತದಾರರನ್ನು ಹೊಂದಿದೆ. ಕಿನ್ನಾವುರ್‌ನ ಕಾ ಮತಗಟ್ಟೆ ಕನಿಷ್ಠ ಸಂಖ್ಯೆಯ(6) ಮತದಾರರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News