ನ.11ರಂದು ವಿಜಯೋತ್ಸವದ ಕಂಬಳ: ಶಾಸಕ ಅಭಯಚಂದ್ರ ಜೈನ್
ಮೂಡುಬಿದಿರೆ, ನ.8: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ನ.11ರಂದು ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಕಂಬಳ ಕ್ರೀಡಾಂಗಣದಲ್ಲಿ ನಡೆಯುವ ವಿಜಯೋತ್ಸವ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ 8 ಮಂದಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಅವರು ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ನ.11ರಂದು ಬೆಳಗ್ಗೆ 8 ಗಂಟೆಗೆ ಕಂಬಳ ಉದ್ಘಾಟನೆಗೊಳ್ಳಲಿದೆ. ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಡಿ.ವಿ. ಸದಾನಂದ ಗೌಡ, ಡಿ.ಕೆ.ಶಿವಕುಮಾರ್, ಟಿ.ಬಿ. ಜಯಚಂದ್ರ, ಬಿ. ರಮಾನಾಥ ರೈ, ಎಚ್.ಎಂ.ರೇವಣ್ಣ, ಪ್ರಮೋದ್ ಮಧ್ವರಾಜ್, ಎ. ಮಂಜು, ಯು.ಟಿ.ಖಾದರ್, ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್, ಎಂ. ವೀರಪ್ಪ ಮೊಯ್ಲಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವಿನಯಕುಮಾರ್ ಸೊರಕೆ, ವಸಂತ ಬಂಗೇರ, ಸುನೀಲ್ ಕುಮಾರ್, ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಪ್ರತಾಪಚಂದ್ರ ಶೆಟ್ಟಿ, ಐವನ್ ಡಿಸೋಜ ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಹಾಗೂ 2015 ಮತ್ತು 2016ನೆ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಾದ ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ಜಯಕರ ಮಡಿವಾಳ ನಕ್ರೆ ಹಾಗೂ ಬಾರಾಡಿಬೀಡು ಡಾ. ಜೀವಂಧರ ಬಲ್ಲಾಳ್ ಹಾಗೂ ಕೊಳಕ್ಕೆ ಇರ್ವತ್ತೂರು ಆನಂದ, ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸುಖೇಶ್ ಹೆಗ್ಡೆ ಕಡ್ತಲ, ಕಂಬಳಕ್ಕೆ ಶಾಮಿಯಾನ, ಧ್ವನಿ ಬಳಕೆಯ ವ್ಯವಸ್ಥೆಯನ್ನು ಮಾಡುತ್ತಾ ಬಂದಿರುವ ಜಿ.ಕೆ. ಎಕೋರೇಟರ್ಸ್‌ನ ಗಣೇಶ್ ಕಾಮತ್ ಅವರನ್ನು ಸನ್ಮಾನಿಸಲಾಗುವುದು.
ಬಹುಮಾನಗಳು: ಕನೆಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಪ್ರಥಮ 2 ಪವನು ಚಿನ್ನ ಹಾಗೂ ದ್ವಿತೀಯ 1 ಪವನು. ಅಡ್ಡ ಹಲಗೆ ಹಗ್ಗ, ನೇಗಿಲು, ಕಿರಿಯ ವಿಭಾಗಗಳಲ್ಲಿ ಪ್ರಥಮ 1 ಪವನು ಹಾಗೂ ದ್ವಿತೀಯ ಸ್ಥಾನಕ್ಕೆ 1/2 ಪವನು ಚಿನ್ನದ ಬಹುಮಾನ ನೀಡಲಾಗುವುದು. ಹಾಗೂ ವಿಜೇತ ಕೋಣಗಳನ್ನು ಓಡಿಸಿದವರಿಗೆ 1/4 ಪವನು ಚಿನ್ನ ಹಾಗೂ ವಿಜೇತ ಕೋಣಗಳ ಸಹಾಯಕ ತಂಡಕ್ಕೆ ತಲಾ ಒಂದು ಸಾವಿರ ನಗದು ಬಹುಮಾನ ನೀಡಲಾಗುವುದು. ಸುಮಾರು 200 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ನ.11ರಂದು ಮಧ್ಯಾಹ್ನ 10 ಸಾವಿರ ಮಂದಿಗೆ ತುಳುನಾಡಿದ ಸಾಂಪ್ರದಾಯಿಕ ಶೈಲಿಯ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸುದ್ದಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಕಾರ್ಯದರ್ಶಿಗಳಾದ ಸುರೇಶ್ ಪ್ರಭು, ರತ್ನಾಕರ ಸಿ. ಮೊಯ್ಲಿ, ಚಂದ್ರಹಾಸ ಸನಿಲ್, ಹರ್ಷವರ್ಧನ ಪಡಿವಾಳ್, ಪ್ರೇಮನಾಥ ಮಾರ್ಲ ಹಾಗೂ ದಿನಕರ ಶೆಟ್ಟಿ, ವಲೇರಿಯನ್ ಸಿಕ್ವೇರಾ, ಮುಹಮ್ಮದ್ ಅಸ್ಲಾಂ ಮತ್ತಿತರರು ಉಪಸ್ಥಿತರಿದ್ದರು.