ಪ.ಪೂ. ಕಾಲೇಜುಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್: ಆಳ್ವಾಸ್ ಪ.ಪೂ. ಕಾಲೇಜಿಗೆ ಪ್ರಶಸ್ತಿ
ಮೂಡುಬಿದಿರೆ, ನ. 8: ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ. ಹಾಗೂ ರೋಟರಿ ಪದವಿಪೂರ್ವ ಕಾಲೇಜು, ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜು ಒಟ್ಟು 40 ವಿಭಾಗದಲ್ಲಿ 31 ಚಿನ್ನ, 25 ಬೆಳ್ಳಿ ಮತ್ತು 08 ಕಂಚಿನ ಪದಕಗಳೊಂದಿಗೆ ಒಟ್ಟು 240 ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.
ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಆಶೀಸ್ ಬಲೋಟಿಯಾ, ಹೆಚ್.ಎನ್. ಶಂಕರಪ್ಪ ಹಾಗೂ ಸಂತ ಅಲೋಶಿಯಸ್ ಪ.ಪೂ. ಕಾಲೇಜಿನ ರೋಹನ್, ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ಜ್ಯೋತ್ಸ್ನಾ, ಅನಿತಾ ವಿ.ಎಸ್., ಪ್ರಿಯಾ ಎಲ್.ಡಿ. ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು.
ದ್ವಿತೀಯ ಪ್ರಶಸ್ತಿಯನ್ನು ಮಂಗಳೂರು ನಗರವನ್ನು ಪ್ರತಿನಿಧಿಸಿದ 69 ಅಂಕಗಳೊಂದಿಗೆ ಸಂತ ಅಲೋಶಿಯಸ್ ಪ.ಪೂ. ಕಾಲೇಜು ತಂಡ ಪಡೆಯಿತು. ನವೆಂಬರ್ 11 ರಿಂದ 13ರವರೆಗೆ ಬ್ರಹ್ಮಾವರದಲ್ಲಿ ನಡೆಯುವ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡದಿಂದ ಆಯ್ಕೆಯಾದ 68 ಕ್ರೀಡಾಪಟುಗಳಲ್ಲಿ 50 ಕ್ರೀಡಾಪಟುಗಳು ಆಳ್ವಾಸ್ ಪ.ಪೂ. ಕಾಲೇಜಿನ ಕ್ರೀಡಾಪಟುಗಳಾಗಿರುತ್ತಾರೆ.
ಸಮಾರೋಪ ಸಮಾರಂಭದಲ್ಲಿ ರೋಟರಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ನಾರಾಯಣ ಪಿ.ಎಂ, ವಕೀಲೆ ಶ್ವೇತಾ ಜೈನ್, ದಕ್ಷಿಣ ಕನ್ನಡ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆಲ್ವಿನ್ ಮಿರಾಂದ, ಮೂಡುಬಿದಿರೆ ರೋಟರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ಕ್ರೀಡಾಕೂಟದ ಸಂಯೋಜಕ ಪ್ರೇಮನಾಥ್ ಶೆಟ್ಟಿ ಉಪಸ್ಥಿತರಿದ್ದರು.