×
Ad

"ಶಿಷ್ಯ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದರೆ ತಲೆ ಕೆಡಿಸಿಕೊಳ್ಳಬೇಡಿ"

Update: 2017-11-08 21:18 IST

ಹೊಸದಿಲ್ಲಿ,ನ.8: ಬಿಜೆಪಿಯ ದಿಗ್ಗಜ ಎಲ್.ಕೆ.ಆಡ್ವಾಣಿ ಅವರ 90ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇದೇ ವೇಳೆ ಹಿರಿಯ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕುಟುಕಲು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ.

"ಆಡ್ವಾಣಿಜಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಯಾವುದೇ ಶಿಷ್ಯ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದರೆ ತಲೆ ಕೆಡಿಸಿಕೊಳ್ಳಬೇಡಿ. ದೇವರು ನಿಮಗೆ ಇನ್ನಷ್ಟು ಸಂತೋಷ, ಆರೋಗ್ಯ, ಆಯುಸ್ಸು ಮತ್ತು ಯಶಸ್ವಿ ಬದುಕನ್ನು ನೀಡಲಿ’’ ಎಂದು ಹಾರೈಸಿ ಲಾಲು ಬುಧವಾರ ಬೆಳಿಗ್ಗೆ ಟ್ವೀಟಿಸಿದ್ದಾರೆ.

 ಆಡ್ವಾಣಿ ಮತ್ತು ಅವರ ಒಂದು ಕಾಲದ ಶಿಷ್ಯ ಪ್ರಧಾನಿ ಮೋದಿ ಅವರ ನಡುವೆ ನಿಧಾನವಾಗಿ ಹೆಚ್ಚುತ್ತಿರುವ ಅಂತರ ಮತ್ತು ಸಂಘರ್ಷವನ್ನು ಲಾಲು ಅವರ ಈ ವಾಗ್ಬಾಣ ಗುರಿಯಾಗಿಸಿಕೊಂಡಿತ್ತು ಎನ್ನುವುದು ಸ್ಪಷ್ಟವಾಗಿದೆ. 90ರ ದಶಕದಲ್ಲಿ ಬಿಜೆಪಿಯ ಉತ್ಕರ್ಷದ ಶಿಲ್ಪಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಉಪಪ್ರಧಾನಿಯಾಗಿದ್ದ ಆಡ್ವಾಣಿ ಅವರು ಪಕ್ಷದ ನಾಯಕತ್ವವು ಮೋದಿ ಮತ್ತು ಅವರ ಬಲಗೈ ಬಂಟ ಅಮಿತ್ ಶಾ ಅವರ ಹೊಸಪೀಳಿಗೆಗೆ ವರ್ಗಾವಣೆಗೊಂಡ ಬಳಿಕ ಅಕ್ಷರಶಃ ಮೂಲೆಗುಂಪಾಗಿದ್ದಾರೆ. 

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಭಾರೀ ವಿಜಯದ ಬಳಿಕ ಆಡ್ವಾಣಿ ಅವರನ್ನು ಹಿರಿಯ ನಾಯಕರಾದ ಎಂ.ಎಂ.ಜೋಷಿ ಮತ್ತು ಯಶವಂತ ಸಿನ್ಹಾ ಅವರೊಂದಿಗೆ ಪಕ್ಷದ ಮಾರ್ಗದರ್ಶಕ ಮಂಡಳಿಗೆ ನಾಮಕರಣ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News