ಮುಂಬೈ ಶಾಲೆಯ ನಾಲ್ಕರಲ್ಲಿ ಒಂದು ಮಗು ಧೂಮಪಾನ ವ್ಯಸನಿ
ಮುಂಬೈ, ನ.8: ನಗರದ ಹತ್ತರಿಂದ ಹತ್ತೊಂಬತ್ತು ವಯಸ್ಸಿನ ಮಕ್ಕಳಲ್ಲಿ ಶೇಕಡಾ 25 ಅಂದರೆ ನಾಲ್ಕರಲ್ಲಿ ಒಬ್ಬರು ಧೂಮಪಾನ ವ್ಯಸನಿಯಾಗಿದ್ದಾರೆ ಅಥವಾ ಇತರ ತಂಬಾಕು ಪದಾರ್ಥಗಳನ್ನು ಸೇವಿಸುತ್ತಾರೆ ಎಂಬ ಆಘಾತಕರ ಮಾಹಿತಿಯು ಮುಂಬೈಯ ಪ್ರಿನ್ಸ್ ಅಲಿ ಆಸ್ಪತ್ರೆ ಮತ್ತು ಮಣಿಪಾಲ ವಿಶ್ವವಿದ್ಯಾಲಯ ಜೊತೆಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ.
ಮಲಗಾಂವ್ ಪ್ರದೇಶದ ವಿದ್ಯಾರ್ಥಿ ಜನಸಂಖ್ಯೆಯು 8,000ದಿಂದ 10,000 ಆಗಿದ್ದು ಇಲ್ಲಿನ ಮುನಿಸಿಪಲ್ ಮತ್ತು ಖಾಸಗಿ ಶಾಲೆಗಳ ಒಂದು ಸಾವಿರ ಮಕ್ಕಳನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂಬಾಕು ಮತ್ತು ಅದರ ದುಷ್ಪರಿಣಾಮಕ್ಕೆ ಸಂಬಂಧಪಟ್ಟ ಪ್ರಶ್ನಾವಳಿಯನ್ನು ವೈದ್ಯರು ಸಿದ್ಧಪಡಿಸಿದ್ದರು. ಈ ಪ್ರಶ್ನಾವಳಿಯ ಪ್ರತಿಗಳನ್ನು ಐದನೇ ತರಗತಿಯಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಹಂಚಲಾಗಿತ್ತು. ಆ ಮೂಲಕ ಪಡೆದ ಉತ್ತರದ ಆಧಾರದಲ್ಲಿ ಈ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂಬಾಕು ಸೇವನೆ ಬಾಯಿ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಅದರಲ್ಲಿ ನಿಕೊಟಿನ್ ಇದೆ ಎಂಬುದೇ ತಿಳಿದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಕ್ಯಾನ್ಸರ್ ಕ್ಲಿನಿಕ್‌ಗಳಲ್ಲಿ ಯುವರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಈ ಸಮೀಕ್ಷೆಯನ್ನು ನಡೆಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.